ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರಥಮ ಆವೃತ್ತಿಯಿಂದಲೂ ಮುನ್ನಡೆಸುತ್ತಿರುವ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ 2021 ಹಾಗೂ 2022ರವರೆಗೂ ಪ್ರಾಂಚೈಸಿ ಭಾಗವಾಗಲಿದ್ದಾರೆ ಎಂದು ಸಿಎಸ್ಕೆ ಸಿಎಒ ಕಾಶಿ ವಿಶ್ವನಾಥನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಧೋನಿ ಯುಎಇನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಐಪಿಎಲ್ನಲ್ಲಿ ಸಿಎಸ್ಕೆ ತಂಡವನ್ನು ಮುನ್ನಡೆಸಲಿದ್ದಾರೆ. ಕೋವಿಡ್ 19 ನಿಂದ ಸ್ಥಳಾಂತರಿಸಲ್ಪಟ್ಟಿರುವ ಶ್ರೀಮಂತ ಲೀಗ್ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ದುಬೈ, ಅಬುಧಾಬಿ ಹಾಗೂ ಶಾರ್ಜಾದಲ್ಲಿ ನಡೆಯಲಿದೆ.
"ಹೌದು, ನಾವು ಎಂಎಸ್ ಧೋನಿ 2021 ಮತ್ತು 2022ರ ಆವೃತ್ತಿಗಳಲ್ಲೂ ಸಿಎಸ್ಕೆ ಭಾಗವಾಗಬಹುದು ಎಂದು ನಾವು ನಿರೀಕ್ಷಿಸಿಬಹುದು" ಎಂದು ವಿಶ್ವನಾಥನ್ ಹೇಳಿದ್ದಾರೆ.
ವರದಿಗಳ ಪ್ರಕಾರ ಧೋನಿ ಕಳೆದ ವಾರ ತಮ್ಮ ತವರೂರಾದ ರಾಂಚಿಯ ಒಳಾಂಗಣ ಅಕಾಡೆಮಿಯಲ್ಲಿ ಕೆಲವು ಸಮಯ ತರಬೇತಿ ನಡೆಸಿದ್ದಾರೆ. ಇನ್ನು ಆಗಸ್ಟ್ 16ರಿಂದ 20ರವರೆಗೆ ಭಾರತದ 15 ಆಟಗಾರರರು ಪಾಲ್ಗೊಳ್ಳಲು ಕಿರು ತರಬೇತಿ ಶಿಬಿರದಲ್ಲೂ ಧೋನಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
"ನಾವು ಕೂಡ ಧೋನಿ ಜಾರ್ಖಂಡ್ನ ಒಳಾಂಗಣ ನೆಟ್ಸ್ನಲ್ಲಿ ತರಬೇತಿ ನಡೆಸುತ್ತಿದ್ದಾರೆ ಎಂದು ಮಾಧ್ಯಮದ ಮೂಲಕವೇ ತಿಳಿದಿದ್ದೇವೆ. ಆದರೆ, ನಾವು ಸಿಎಸ್ಕೆ ನಾಯಕನ ಬಗ್ಗೆ ಸ್ವಲ್ವವೂ ಚಿಂತಿಸಬೇಕಾಗಿಲ್ಲ ಹಾಗೂ ಅವರ ಬಗ್ಗೆ ಚಿಂತಿಸುವುದು ಇಲ್ಲ. ಅವರಿಗೆ ಅವರ ಜವಾಬ್ದಾರಿ ಏನೆಂದು ತಿಳಿದಿದೆ. ಅವರು ತನ್ನನ್ನು ಮತ್ತು ತಂಡ ನೋಡಿಕೊಳ್ಳಲಿದ್ದಾರೆ" ಎಂದು ವಿಶ್ವನಾಥನ್ ಹೇಳಿದ್ದಾರೆ.
39 ವರ್ಷದ ಧೋನಿ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಬಳಿಕ ಯಾವುದೇ ಮಾದರಿಯ ಕ್ರಿಕೆಟ್ನಲ್ಲೂ ಕಾಣಿಸಿಕೊಂಡಿಲ್ಲ. ಅವರ ಅನುಪಸ್ಥಿತಿಯಲ್ಲಿ ಭಾರತದ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್ ನಿರ್ವಹಿಸುತ್ತಿದ್ದಾರೆ.
ಇನ್ನು ಧೋನಿ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 10 ಬಾರಿ ಮುನ್ನಡೆಸಿದ್ದು, 10 ಬಾರಿ ಪ್ಲೇ ಆಫ್ , 8 ಬಾರಿ ಫೈನಲ್ ಹಂತಕ್ಕೆ ಕೊಂಡೊಯ್ದಿದ್ದಾರೆ. ಅದರಲ್ಲಿ 3 ಬಾರಿ ಚಾಂಪಿಯನ್ ಹಾಗೂ 5 ಬಾರಿ ರನ್ನರ್ ಅಪ್ ಪಡೆದಿದೆ.