ಹೈದರಾಬಾದ್: ಮುಂದಿನ ವರ್ಷ ಭಾರತದಲ್ಲಿ ನಡೆಯುವ ಟಿ-20 ವಿಶ್ವಕಪ್ ವೇಳೆಗೆ ಭಾರತ ತಂಡಕ್ಕೆ ಮರಳಲು ತಯಾರಿ ನಡೆಸುತ್ತಿರುವುದಾಗಿ ಈಟಿವಿ ಭಾರತ ನಡೆಸಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಆಲ್ರೌಂಡರ್ ವಿಜಯ್ ಶಂಕರ್ ಹೇಳಿಕೊಂಡಿದ್ದಾರೆ.
2019ರ ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರಿಗೆ ಅಚ್ಚರಿ ಮೂಡಿಸಿದ್ದ 29 ವರ್ಷದ ಶಂಕರ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಅಂದು ಹೊರಬಿದ್ದವರು ಇಂದಿಗೂ ರಾಷ್ಟ್ರೀಯ ತಂಡಕ್ಕೆ ಮರಳಲು ಸಾಧ್ಯವಾಗಿಲ್ಲ. ಈಟಿವಿ ಭಾರತದ ಜೊತೆ ರಾಷ್ಟ್ರೀಯ ತಂಡಕ್ಕೆ ಕಮ್ಬ್ಯಾಕ್ ಮಾಡಲು ನಡೆಸುತ್ತಿರುವ ತಯಾರಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
"ನಾನು ತಂಡದಿಂದ ಹೊರಬಿದ್ದಾಗ ತುಂಬಾ ಕಷ್ಟವಾಯಿತು. ಆ ವಿಷಯ ಯಾವುದೇ ಕ್ರಿಕೆಟಿಗನಿಗಾದರು ನೋವಾಗುತ್ತದೆ. ಏಕೆಂದರೆ ದೇಶಕ್ಕಾಗಿ ಆಡುವುದು ಯಾವಾಗಲೂ ನಮಗೆ ಕನಸಾಗಿರುತ್ತದೆ. ನಾನು ತಂಡದಿಂದ ಹೊರಬಂದಾಗ ತುಂಬಾ ನಿರಾಶೆ ಅನುಭವಿಸಿದ್ದೆ. ನಾನು ತಂಡಕ್ಕೆ ಮರಳಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದೆ. ಆದ್ರೆ ಮತ್ತೆ ಒಂದೆರಡು ಬಾರಿ ಗಾಯಕ್ಕೊಳಗಾದೆ. ಅದು ನನ್ನನ್ನು ಸ್ವಲ್ಪ ಸಮಯ ಆಟದಿಂದ ದೂರವಿಟ್ಟಿತು" ಎಂದು ತಿಳಿಸಿದ್ದಾರೆ.

"ಕಳೆದ ದೇಶಿ ಋತುವಿನಲ್ಲಿ ನಾನು ಉತ್ತಮ ಪ್ರದರ್ಶನ ತೋರಿದ್ದೇನೆ. ನ್ಯೂಜಿಲ್ಯಾಂಡ್ನಲ್ಲಿ ನಡೆದ ಭಾರತ ಎ ಸರಣಿಯಲ್ಲೂ ಯೋಗ್ಯವಾದ ಪ್ರದರ್ಶನ ಕಾಯ್ದುಕೊಂಡಿದ್ದೇನೆ. ಎಲ್ಲೇ ಆಡಿದರೂ ನಾನು ಉತ್ತಮ ಪ್ರದರ್ಶನವನ್ನು ಕಾಪಾಡಿಕೊಳ್ಳುತ್ತಿರುವೆ. ಅದು ರಾಷ್ಟ್ರೀಯ ತಂಡಕ್ಕೆ ಮರಳಲು ನಾನು ಮಾಡಬೇಕಿರುವ ಏಕೈಕ ಕೆಲಸವಾಗಿದೆ. ನಾನು ಭಾರತ ತಂಡಕ್ಕೆ ಮರಳುವ ವಿಚಾರದ ಬಗ್ಗೆ ಈಗ ಉತ್ತರಿಸುವುದಕ್ಕೆ ಆಗುವುದಿಲ್ಲ. ಏಕೆಂದರೆ ಅದು ನನ್ನ ಹತೋಟಿಯಲ್ಲಿಲ್ಲ. ಆದರೆ ಸಿದ್ಧತೆ ಮತ್ತು ಪರಿಶ್ರಮದ ಮೇಲೆ ನಾನು ನಿಯಂತ್ರಣ ಹೊಂದಿದ್ದು, ಉತ್ತಮ ಪ್ರದರ್ಶನವನ್ನು ಕಾಯ್ದುಕೊಳ್ಳುವ ಅಗತ್ಯವಿದೆ" ಎಂದು ಅವರು ಹೇಳಿದ್ದಾರೆ.

ಡೊಮೆಸ್ಟಿಕ್ ಆವೃತ್ತಿಯ ಸಿದ್ಧತೆ ಬಗ್ಗೆ ಕೇಳಿದ್ದಕ್ಕೆ, ನಾನು ಐಪಿಎಲ್ ವೇಳೆ ಒಳಗಾಗಿರುವ ಗಾಯಗಳಿಂದ ಈಗಷ್ಟೇ ಹೊರಬಂದಿದ್ದೇನೆ. ನಿಜವಾಗಲೂ ಆಟಕ್ಕೆ ಮರಳುವುದಕ್ಕೆ ನಾನು ಎದುರು ನೋಡುತ್ತಿದ್ದೇನೆ. ದೀರ್ಘ ಸಮಯ ಸುಮ್ಮನೆ ಕುಳಿತುಕೊಳ್ಳುವುದು ಯಾವುದೇ ಕ್ರಿಕೆಟಿಗನಿಗನಾದರು ನಿರಾಶೆ ತರುತ್ತದೆ. ಹಾಗಾಗಿ ಮೈದಾನಕ್ಕೆ ಮರಳುವುದು ಮುಖ್ಯವಾಗಿದೆ. ನನ್ನಂತಹ ಕ್ರಿಕೆಟಿಗರಿಗೆ ದೇಶಿ ಟೂರ್ನಿಗಳು ಮುಖ್ಯವಾಗಿರುತ್ತವೆ. ನಾನು ಯಾವುದೇ ಕ್ರಿಕೆಟ್ನಲ್ಲಿ ಹೊರಗುಳಿಯುವಂತಹ ಕೆಟ್ಟದ್ದನ್ನು ಮಾಡಿಲ್ಲ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ವಿಜಯ್ ಶಂಕರ್ ಮುಂದಿನ ದಿನಗಳಲ್ಲಿ ಕ್ರಿಕೆಟ್ಗೆ ಮರಳುವುದು ಹಾಗೂ ದೇಶಿ ಋತುವಿನಲ್ಲಿ ಏನು ಮಾಡಬೇಕೆಂದು ಬಯಸಿದ್ದಾರೆ ಎಂಬುದರ ಕುರಿತು ವಿಜಯ್ ಶಂಕರ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವಿಡಿಯೋ ವೀಕ್ಷಿಸಿ.