ಹೈದರಾಬಾದ್: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಭಾರತ, ಆಸ್ಟ್ರೇಲಿಯಾದಂತೆ ಮಹಿಳಾ ಕ್ರಿಕೆಟಿಗರಿಗೆ ಪ್ರೋತ್ಸಾಹ ನೀಡಲು ಹೊಸ ಟಿ-20 ಲೀಗ್ ಆಯೋಜನೆ ಮಾಡಲು ಮುಂದಾಗಿದೆ ಎಂದು ಬಾಂಗ್ಲಾದೇಶದ ಮಹಿಳಾ ಕ್ರಿಕೆಟರ್ ಜಹನಾರಾ ಆಲಂ ಹೇಳಿದ್ದಾರೆ.
ಈಟಿವಿ ಭಾರತದ ಜೊತೆ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಬಾಂಗ್ಲಾದೇಶದ ಕ್ರಿಕೆಟ್ ಚಟುವಟಿಕೆಗಳ ಬಗ್ಗೆ ಮಾತನಾಡಿದ ಜಹನಾರಾ " ನಮ್ಮ ದೇಶವು ಭಾರತದಂತೆ ಕ್ರಿಕೆಟ್ ಕ್ರೇಜಿ ರಾಷ್ಟ್ರವಾಗಿದೆ. ಪುರುಷರ ಕ್ರಿಕೆಟ್ ಮಾತ್ರವಲ್ಲದೇ ಮಹಿಳಾ ಕ್ರಿಕೆಟ್ ಕೂಡ ವೇಗವಾಗಿ ಬೆಳೆಯಲು ಪ್ರಾರಂಭಿಸಿದೆ ಎಂದಿದ್ದಾರೆ.
2007ರಿಂದ ಬಾಂಗ್ಲಾದೇಶದಲ್ಲಿ ಮಹಿಳಾ ಕ್ರಿಕೆಟ್ ಶುರುವಾಗಿದೆ. ಅಂದಿನಿಂದಲೂ ತಂಡವನ್ನು ಸಬಲೀಕರಣ ಮಾಡಲಾಗುತ್ತಿದೆ. ನಾವು ಆಟಗಾರರ ಬಗ್ಗೆ ಮಾತನಾಡುವುದಾದರೆ ಅವರು ಕ್ರಿಕೆಟೇತರ ವಿಚಾರಗಳಿಂದ ಹಲವು ಟೀಕೆಗೆ ಗುರಿಯಾಗುತ್ತಿದ್ದಾರೆ. ಹಲವಾರು ರಾಷ್ಟ್ರೀಯ ಕ್ರಿಕೆಟಿಗರು ಇದೇ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಜಹನಾರಾ ಹೇಳಿದ್ದಾರೆ.
ಇನ್ನು ಮಹಿಳಾ ಕ್ರಿಕೆಟ್ ಬಗ್ಗೆ ಮಾತನಾಡುತ್ತಾ, ಮೊದಲು ರಾಷ್ಟ್ರೀಯ ತಂಡದ ಆಟಗಾರ್ತಿಯರು ಸಹಾ ಕೆಲವು ಸಮಸ್ಯೆಗಳನ್ನು ಎದುರಿಸಿದ್ದರು. ಆದರೆ, 2018ರ ಏಷ್ಯಾಕಪ್ ಗೆದ್ದ ಮೇಲೆ ಪರಿಸ್ಥಿತಿಗಳು ಸುಧಾರಣೆ ಕಂಡಿವೆ. ಪೋಷಕರು ತಮ್ಮ ಮಕ್ಕಳನ್ನು ಕ್ರಿಕೆಟ್ ಆಟವಾಡಲು ಪ್ರೋತ್ಸಾಹಿಸುತ್ತಿದ್ದಾರೆ. ಬಿಸಿಬಿ ಕೂಡ ಮಹಿಳಾ ಕ್ರಿಕೆಟ್ ಅನ್ನು ಪ್ರೋತ್ಸಾಹಿಸುತ್ತಿದೆ. ಕ್ರಿಕೆಟ್ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ನಮಗಾಗಿ ಪ್ರವಾಸಗಳನ್ನು ಆಯೋಜಿಸುತ್ತಿದೆ, ಶೀಘ್ರದಲ್ಲೇ ಮಹಿಳಾ ಬಿಗ್ಬಾಶ್, ಮಹಿಳಾ ಐಪಿಎಲ್ ರೀತಿಯ ಟಿ-20 ಲೀಗ್ವೊಂದನ್ನು ಆಯೋಜಿಸುವ ವಿಚಾರವಾಗಿ ಚರ್ಚೆಗಳು ಸಾಗಿವೆ ಎಂದು ಜಹನಾರಾ ಬಾಂಗ್ಲಾದೇಶದ ಕ್ರಿಕೆಟ್ ಬೆಳವಣಿಗೆಯನ್ನು ಹಂಚಿಕೊಂಡಿದ್ದಾರೆ.
ಈ ಟಿವಿ ಭಾರತದ ಜೊತೆ ಜಹಾನಾರ ಇನ್ನು ಹಲವಾರು ವಿಚಾರಗಳನ್ನು ಹಂಚಿಕೊಡಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವಿಡಿಯೋ ನೋಡಿ.