ಲಾಹೋರ್: ಪಾಕಿಸ್ತಾನ ಸೂಪರ್ ಲೀಗ್ ಅನ್ನು ಪಾಕಿಸ್ತಾನದಲ್ಲೇ ನಡೆಸಲು ಪಿಸಿಬಿ ನಿರ್ಧರಿಸಿದ್ದು, ಇದಕ್ಕಾಗಿ 4 ಕ್ರೀಡಾಂಗಣಗಳನ್ನು ಗೊತ್ತು ಮಾಡಿದೆ.
ಫೆಬ್ರವರಿ 20ರಿಂದ 22 ರವರೆಗೆ 2020ರ ಆವೃತ್ತಿಯ ಪಿಎಸ್ಎಲ್ ಲೀಗ್ ಆರಂಭವಾಗಲಿದ್ದು, ಸಂಪೂರ್ಣ 34 ಪಂದ್ಯಗಳನ್ನು ಲಾಹೋರ್, ರಾವಲ್ಫಿಂಡಿ, ಕರಾಚಿ ಹಾಗೂ ಮುಲ್ತಾನ್ ಸುಲ್ತಾನ್ನಲ್ಲಿ ನಡೆಸಲು ಪಿಸಿಬಿ ನಿರ್ಧರಿಸಿದೆ.
ಕಳೆದ ಆವೃತ್ತಿಯಲ್ಲಿ ಕೊನೆಯ 8 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದಿದ್ದವು. ಉಳಿದ ಪಂದ್ಯಗಳು ಯುಎಇನಲ್ಲಿ ನಡೆದಿದ್ದವು. ಪಾಕಿಸ್ತಾನದಲ್ಲಿ ನಡೆದಿದ್ದ ಪಂದ್ಯಗಳಿಗೆ ಭದ್ರತೆ ಕಾರಣ ನೀಡಿ ವಿದೇಶದ ಕೆಲವು ಆಟಗಾರರು ಟೂರ್ನಿಯಿಂದ ಹಿಂದೆ ಸರಿದಿದ್ದರು. ಆದರೆ, ಈ ಬಾರಿ ಎಲ್ಲ ಪಂದ್ಯಗಳನ್ನು ಪಾಕಿಸ್ತಾನದಲ್ಲೇ ನಡೆಸಲು ತೀರ್ಮಾನಿಸಿರುವ ಪಿಸಿಬಿ ನಿರ್ಧಾರದಿಂದ ವಿದೇಶಿ ಆಟಗಾರರನ್ನು ಕಳೆದುಕೊಳ್ಳಲಿದೆಯಾ ಎಂದು ಕಾದು ನೋಡಬೇಕಿದೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಇದೀಗ ಪಿಸಿಬಿಯ ದೊಡ್ಡ ಕ್ರೀಡಾಕೂಟವಾದ ಪಿಎಸ್ಎಲ್ನ ಎಲ್ಲ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸುತ್ತಿರುವುದು ನಮ್ಮ ದೊಡ್ಡ ಸಾಧನೆಯಾಗಿದೆ. ಪಿಎಸ್ಎಲ್ ತವರಿನ ಜನರ ಮುಂದೆ ನಡೆಯುತ್ತಿದೆ ಎಂದು ಹೇಳುವುದಕ್ಕೆ ನನಗೆ ಯಾವುದೇ ಅನುಮಾನವಿಲ್ಲ. ಕಳೆದ ಆವೃತ್ತಿಯ ವೇಳೆ ಪಾಕಿಸ್ತಾನ ಜನರಿಗೆ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳುತ್ತಿದ್ದೇವೆ. ಈ ಆವೃತ್ತಿಯನ್ನು ತವರಿನಲ್ಲೇ 4 ಕೇಂದ್ರಗಳಲ್ಲಿ ನಡೆಸುತ್ತೇವೆಂದು" ಪಿಸಿಬಿ ಅಧ್ಯಕ್ಷ ಎಹ್ಸಾನ್ ಮಣಿ ತಿಳಿಸಿದ್ದಾರೆ.
2020ರ ಪಿಎಸ್ಎಲ್ ಲೀಗ್ನಲ್ಲಿ 36 ವಿದೇಸಿ ಆಟಗಾರರು ಆಡಲಿದ್ದಾರೆ. ಈ ಸ್ಥಾನಗಳಿಗಾಗಿ ಈಗಾಗಲೆ 22 ದೇಶಗಳಿಂದ 425 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಲಿಸ್ಟ್ನಲ್ಲಿ 12 ಆಸ್ಟ್ರೇಲಿಯಾ, 109 ಇಂಗ್ಲೆಂಡ್, 11 ನ್ಯೂಜಿಲ್ಯಾಂಡ್, 27 ದಕ್ಷಿಣ ಆಫ್ರಿಕಾ, 39 ಶ್ರೀಲಂಕಾ. 82 ವೆಸ್ಟ್ ಇಂಡೀಸ್ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆಂದು ಎಂದು ಮಣಿ ತಿಳಿಸಿದ್ದಾರೆ.
ಬುಧವಾರ ಎಲ್ಲಾ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಯುತ್ತದೆ ಎಂದು ತಿಳಿಸಿರುವುದರಿಂದ ಎಷ್ಟು ಮಂದಿ ಆಟಗಾರರು ಈ ಪಟ್ಟಿಯಿಂದ ಹೊರಬರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.