ನವದೆಹಲಿ: ಭಾರತ ಏಕದಿನ ಮತ್ತು ಟಿ20 ತಂಡದ ಪ್ರಧಾನ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ತಮಗೆ ಆಸೀಸ್ ಲೆಜೆಂಡ್ ಶೇನ್ ವಾರ್ನ್ ಸ್ಫೂರ್ತಿ ಮತ್ತು ತಾವೂ ಅವರಂತೆ ಬೌಲಿಂಗ್ ಮಾಡಬೇಕೆಂಬ ಮಹದಾಸೆ ಹೊಂದಿರುವುದಾಗಿ ತಿಳಿಸಿದ್ದಾರೆ.
ಶೇನ್ ವಾರ್ನ್ 1993ರ ಆ್ಯಶಸ್ ಟೆಸ್ಟ್ ಸರಣಿಯ ವೇಳೆ ಇಂಗ್ಲೆಂಡ್ ತಂಡದ ಮೈಕ್ ಗ್ಯಾಟಿಂಗ್ ಅವರ ವಿಕೆಟ್ ಪಡೆದಿದ್ದರು. ವಾರ್ನ್ ಅಂದು ಗ್ಯಾಟಿಂಗ್ ಅವರನ್ನು ಬೌಲ್ಡ್ ಮಾಡಿದ ರೀತಿ ಬೌಲಿಂಗ್ ಮಾಡಬೇಕೆಂದು ಪ್ರತಿಯೊಬ್ಬ ಲೆಗ್ ಸ್ಪಿನ್ನರ್ನ ಕನಸಾಗಿದೆ. ಆ ಎಸೆತವನ್ನು ' ಬಾಲ್ ಆಫ್ ದ ಸೆಂಚುರಿ ' ಎಂದೇ ಪರಿಗಣಿಸಲಾಗಿದೆ.
![ಶೇನ್ ವಾರ್ನ್](https://etvbharatimages.akamaized.net/etvbharat/prod-images/9513651_shane-warne-is-one-of-the-greatest-spinners-of-world-cricket.jpg)
ನಾನು ಶೇನ್ ವಾರ್ನ್ ಸರ್ ವಿಡಿಯೋಗಳನ್ನು ನೋಡಲು ಶುರು ಮಾಡಿದ ನಂತರ, ನನಗೆ ಲೆಗ್ ಸ್ಪಿನ್ ಅಂದರೆ ಹೇಗಿರುತ್ತದೆ ಎನ್ನುವುದು ಅರಿವಾಯಿತು. ಅವರು ನನಗೆ ಮಾದರಿಯಾಗಿದ್ದಾರೆ. ನಾನು ಅವರಂತಾಗಬೇಕು, ಅವರಂತೆ ಬೌಲಿಂಗ್ ಮಾಡಬೇಕು ಎನ್ನುವುದು ನನ್ನ ಕನಸು ಎಂದು ಚಹಾಲ್ ಫ್ರಂಟ್ರೋ ಆನ್ಲೈನ್ ಕ್ಲಾಸ್ನಲ್ಲಿ ಮಾತನಾಡುವ ವೇಳೆ ತಿಳಿಸಿದ್ದಾರೆ.
ಶೇನ್ ವಾರ್ನ್ ಬ್ಯಾಟ್ಸ್ಮನ್ಗಳನ್ನು ಬಲೆಗೆ ಬೀಳಿಸಿಕೊಳ್ಳುವ ರೀತಿಯನ್ನು ನಾನು ಬಹಳ ಆನಂದಿಸುತ್ತೇನೆ. ಅವರು ಡ್ರಿಫ್ಟ್ ಅನ್ನು ನಿಯಂತ್ರಿಸುವ ರೀತಿಯನ್ನು ನಾನು ಅವರ ವಿಡಿಯೊಗಳನ್ನು ನೋಡುವ ಮೂಲಕ ನಾನು ಕಲಿತಿದ್ದೇನೆ ಎಂದು ಹೇಳಿದರು.
ನಾನು ಅವರ ಬೌಲಿಂಗ್ ವಿಡಿಯೋಗಳನ್ನು ನೋಡುತ್ತೇನೆ, ವಿಶೇಷವಾಗಿ ಮೈಕ್ ಗ್ಯಾಟಿಂಗ್ ಅವರನ್ನು ಬೌಲ್ಡ್ ಮಾಡಿದ ಎಸೆತವನ್ನು ನೋಡುವಾಗ, ನಾನು ಕೂಡ ಈ ರೀತಿ ಬ್ಯಾಟ್ಸ್ಮನ್ರನ್ನು ಒಮ್ಮೆಯಾದರೂ ಔಟ್ ಮಾಡಬೇಕೆಂದು ಕನಸು ಕಾಣುತ್ತಿದ್ದೆ. ಅದು ಕಳೆದ ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ನಿಜವಾಯಿತು. ಕಿವೀಸ್ನ ಮಾರ್ಟಿನ್ ಗಪ್ಟಿಲ್ ಅವರ ವಿಕೆಟ್ಅನ್ನು ನಾನು ಅದೇ ಮಾದರಿಯಲ್ಲಿ ಪಡೆದಿದ್ದೆ. ನನ್ನ ಪ್ರಕಾರ ಅದೊಂದು ವಿಶೇಷ ಎಸೆತವಾಗಿತ್ತು ಎಂದು ಭಾರತದ ಪರ 54 ಏಕದಿನ ಮತ್ತು 45 ಟಿ20 ಪಂದ್ಯಗಳನ್ನಾಡಿರುವ 30 ವರ್ಷದ ಚಹಾಲ್ ಹೇಳಿದ್ದಾರೆ.