ಮ್ಯಾಂಚೆಸ್ಟರ್: ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಇಂಗ್ಲೆಂಡ್ ತಂಡ ಗೆದ್ದುಕೊಂಡಿದೆ. ಮೂರನೇ ಪಂದ್ಯದ ಗೆಲುವಿನಲ್ಲಿ ಪ್ರಮುಖಪಾತ್ರ ವಹಿಸಿದ ಅನುಭವಿ ಪೇಸ್ ಜೋಡಿಗಳಾದ ಜಿಮ್ಮಿ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಅವರನ್ನು ತಂಡದ ನಾಯಕ ಜೋ ರೂಟ್ ಹಾಡಿ ಹೊಗಳಿದ್ದಾರೆ.
ಅನುಭವಿ ವೇಗದ ಬೌಲರ್ ಸ್ಟುವರ್ಟ್ಸ್ ಬ್ರಾಡ್ ಅವರ ಅಮೋಘ ಬೌಲಿಂಗ್ ಪ್ರದರ್ಶನದಿಂದ ಇಂಗ್ಲೆಂಡ್ ತಂಡ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ 269 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಬ್ರಾಡ್ 10 ವಿಕೆಟ್ ಕಿತ್ತು ಮಿಂಚಿದರು.
ಮೊದಲ ಇನಿಂಗ್ಸ್‌ನಲ್ಲಿ 31ಕ್ಕೆ 6 ವಿಕೆಟ್ ಮತ್ತು ಎರಡನೇ ಇನಿಂಗ್ಸ್‌ನಲ್ಲಿ 36 ಕ್ಕೆ 4 ವಿಕೆಟ್ ಉರುಳಿಸಿ ಒಟ್ಟು 10 ವಿಕೆಟ್ ಪಡೆದ ಸಾಧನೆ ಮಾಡಿದರು. ಇದೇ ಪಂದ್ಯದಲ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕಿನ 500ನೇ ವಿಕೆಟ್ ಸಂಪಾದಿಸಿ ಈ ಸಾಧನೆ ಮಾಡಿದ ಇಂಗ್ಲೆಂಡ್‌ನ ಎರಡನೇ ಬೌಲರ್ ಹಾಗೂ ವಿಶ್ವದ ನಾಲ್ಕನೇ ವೇಗಿ ಎಂಬ ಹೆಗ್ಗಳಿಕೆ ಪಾತ್ರರಾದರು. ಮೊದಲ ಟೆಸ್ಟ್ ಪಂದ್ಯದಲ್ಲಿ ಹೊರಗುಳಿದ್ದ ಬ್ರಾಡ್ ಎರಡು ಮತ್ತು ಮೂರನೇ ಪಂದ್ಯದಲ್ಲಿ ಕಣಕ್ಕಿಳಿದು ಸರಣಿಯಲ್ಲಿ 16 ವಿಕೆಟ್ ಪಡೆದು ಮಿಂಚಿದರು.
"ಟೆಸ್ಟ್ ಪಂದ್ಯದಲ್ಲಿ 500 ವಿಕೆಟ್ ಪಡೆಯುವುದ ಒಂದು ಅದ್ಭುತ ಸಾಧನೆಯಾಗಿದೆ. ಇದನ್ನ ಸ್ಟುವರ್ಟ್ ಮಾಡಿದ್ದಾರೆ. ಅವರು ತಂಡದಲ್ಲಿ ಇರುವುದು ನಮ್ಮ ಅದೃಷ್ಟ. ಅವರಿಂದ ನಾವು ಸಾಕಷ್ಟು ಕಲಿತಿದ್ದೇವೆ. ಅವರ ಜೊತೆ ಆಂಡರ್ಸನ್ ಕೂಡಾ ಒಬ್ಬ ಸರ್ವಕಾಲಿಕ ವೇಗದ ಬೌಲರ್. ಇವರಿಬ್ಬರು ನಮ್ಮ ತಂಡದಲ್ಲಿರುವುದು ನಮಗೆ ಮತ್ತಷ್ಟು ಬಲ ನೀಡಿದೆ. ಇವರ ಜೊತೆ ಡ್ರೆಸ್ಸಿಂಗ್ ರೂಂ ಹಂಚ್ಚಿಕೊಂಡಿದ್ದು, ಕಿರಿಯರಾಗಿ ನಮ್ಮ ಅದೃಷ್ಟ ಎಂದು ಜೋ ರೂಟ್ ಹೇಳಿದ್ದಾರೆ.
"ನಾವು ಸಾರ್ವಕಾಲಿಕ ಇಂಗ್ಲೆಂಡ್‌ನ ಇಬ್ಬರು ಅತ್ಯುತ್ತಮ ಬೌಲರ್‌ಗಳನ್ನು ನೋಡುತ್ತಿದ್ದೇವೆ ಮತ್ತು ಅವರಿಬ್ಬರ ಜೊತೆ ಒಂದೇ ತಂಡದಲ್ಲಿ ಆಡುತ್ತಿದ್ದೇವೆ, ಅವರ ಜೊತೆ ನಾವು ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದು, ನಮಗೆ ಹೆಮ್ಮೆ ಅನಿಸುತ್ತದೆ ಎಂದರು.