ಮ್ಯಾಂಚೆಸ್ಟರ್: ಸ್ಪಿನ್ನರ್ ಆ್ಯಡಂ ಜಂಪಾ ಮತ್ತು ಮಿಚೆಲ್ ಸ್ಟಾರ್ಕ್ ಬೌಲಿಂಗ್ ದಾಳಿಗೆ ತತ್ತಿರಿಸಿದ ಅತಿಥೇಯ ಇಂಗ್ಲೆಂಡ್ ತಂಡ ಎರಡನೇ ಪಂದ್ಯದಲ್ಲಿ ಕೇವಲ 231 ರನ್ಗಳಿಸಿದೆ.
ಟಾಸ್ ಗೆದ್ದಯ ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 231 ರನ್ಗಳಿಸಿದೆ.
ಕಳೆದ ಪಂದ್ಯದಲ್ಲಿ 84 ರನ್ ಸಿಡಿಸಿದ್ದ ಜಾನಿ ಬೈರ್ಸಟೋವ್ ಇಂದು ಶೂನ್ಯ ಸಂಪಾದಿಸಿದರು. ಮತ್ತೊಬ್ಬ ಆರಂಭಿಕ ಜೇಸನ್ ರಾಯ್ 21 ರನ್ಗಳಿಸಿದ್ದ ವೇಳೆ ರನ್ಔಟ್ ಆದರು. ಈ ಹಂತದಲ್ಲಿ ಒಂದಾದ ಜೋ ರೂಟ್ ಹಾಗೂ ನಾಯಕ ಇಯಾನ್ ಮಾರ್ಗನ್ 3ನೇ ವಿಕೆಟ್ಗೆ 61 ರನ್ಗಳ ಜೊತೆಯಾಟ ನೀಡಿದರು. ನಿಧಾನಗತಿ ಆಟಕ್ಕೆ ಮೊರೆ ಹೋದ ರೂಟ್ 73 ಎಸೆತಗಳಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ 39 ರನ್ಗಳಿಸಿ ಜಂಪಾಗೆ ವಿಕೆಟ್ ಒಪ್ಪಿಸಿದರರು.
ನಂತರ ಬಂದ ಬಟ್ಲರ್(3) ಕಮ್ಮಿನ್ಸ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರೆ, 42 ರನ್ ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ನಾಯಕ ಮಾರ್ಗನ್ ಜಂಪಾ ಬೌಲಿಂಗ್ನಲ್ಲಿ ಫಿಂಚ್ ನೀಡಿ ಔಟಾದರು. ಕಳೆದ ಪಂದ್ಯದ ಶತಕವೀರ ಸ್ಯಾಮ್ ಬಿಲ್ಲಿಂಗ್ಸ್(8) ಸ್ಯಾಮ್ ಕರ್ರನ್(1) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರೆ ವೋಕ್ಸ್ ಆಟ 26ಕ್ಕೆ ಸೀಮಿತವಾಯಿತು.
76 ರನ್ಗಳ ಜೊತೆಯಾಟ ನೀಡಿದ ರಶೀದ್-ಕರ್ರನ್
149ಕ್ಕೆ 8 ವಿಕೆಟ್ ಕಳೆದುಕೊಂಡು ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿದ್ದ ಇಂಗ್ಲೆಂಡ್ ತಂಡಕ್ಕೆ 9ನೇ ವಿಕೆಟ್ ಜೊತೆಯಾಟದಲ್ಲಿ 76 ರನ್ಗಳ ಜೊತೆಯಾಟ ನೀಡುವ ಮೂಲಕ ಟಾಮ್ ಕರ್ರನ್(37) ಹಾಗೂ ಆದಿಲ್ ರಶೀದ್(35) ತಂಡದ ಮೊತ್ತವನ್ನು200 ರನ ಗಡಿ ದಾಟಿಸಿದರು.
ಆಸೀಸ್ ಬೌಲರ್ಗಳ ದಾಳಿಯನ್ನು ಕೆಚ್ಚೆದೆಯಿಂದ ಎದುರಿಸಿದ ಕರ್ರನ್ 39 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 35 ರನ್ಗಳಿಸಿ ಕೊನೆಯ ಓವರ್ನಲ್ಲಿ ಔಟಾದರೆ, ರಶೀದ್ ಕೇವಲ 26 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಔಟಾಗದೆ 35 ರನ್ಗಳಿಸಿದರು.
ಆಸ್ಟ್ರೇಲಿಯಾ ಪರ ಆ್ಯಡಂ ಜಂಪಾ 36 ರನ್ ನೀಡಿ 3 ವಿಕೆಟ್ ಪಡೆದರೆ, ಸ್ಟಾರ್ಕ್ 38 ರನ್ ನೀಡಿ 2 ವಿಕೆಟ್ ಪಡೆದರು. ಹೇಜಲ್ ವುಡ್ ಒಂದು ವಿಕೆಟ್ ಪಡೆದರೂ ಕೇವಲ 27 ರನ್ ಬಿಟ್ಟುಕೊಟ್ಟರು. ಕಮ್ಮಿನ್ಸ್ ಹಾಗೂ ಮಿಚೆಲ್ ಮಾರ್ಷ್ ತಲಾ ಒಂದು ವಿಕೆಟ್ ಪಡೆದರು.