ಅಹಮದಾಬಾದ್: ಆತಿಥೇಯ ಭಾರತದ ವಿರುದ್ಧ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಸತತ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಪಡೆದಿರುವ ಭಾರತವು ಈ ಟೆಸ್ಟ್ ಗೆದ್ದು ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್ ಪ್ರವೇಶಿಸುವ ಹಾದಿಯಲ್ಲಿದೆ.
ಈ ಟೆಸ್ಟ್‌ನಲ್ಲಿ ಡ್ರಾ ಸಾಧಿಸಿದರೂ ಭಾರತ ಲಾರ್ಡ್ಸ್ನಲ್ಲಿ ನಡೆಯುವ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಸೋತರೆ ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂತೆ ಆಸ್ಟ್ರೇಲಿಯಾ ತಂಡ ಫೈನಲ್ ಪ್ರವೇಶಿಸಲಿದೆ.
ಇಂಗ್ಲೆಂಡ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ವೇಗಿಗಳಾದ ಜೋಪ್ರಾ ಆರ್ಚರ್ ಹಾಗೂ ಸ್ಟುವರ್ಟ್ ಬ್ರಾಡ್ ಅವರನ್ನು ಕೈಬಿಡಲಾಗಿದೆ. ಅವರ ಬದಲಿಗೆ ಡಾನ್ ಲಾರೆನ್ಸ್ ಹಾಗೂ ಡಾಮ್ ಬೆಸ್ ಅಂತಿಮ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ತಂಡದಲ್ಲಿ ವೇಗಿ ಬುಮ್ರಾ ಸ್ಥಾನದಲ್ಲಿ ಮೊಹಮದ್ ಸಿರಾಜ್ ಆಡಲಿದ್ದಾರೆ.
ಚೆನ್ನೈನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ 227 ರನ್ಗಳಿಂದ ಸೋತರೆ, ನಂತರ 2ನೇ ಪಂದ್ಯವನ್ನು 317 ರನ್‌ಗಳ ಭರ್ಜರಿ ಜಯ ಗಳಿಸಿತ್ತು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ: 6 ಬಾಲ್ಗೆ 6 ಸಿಕ್ಸರ್ ಸಿಡಿಸಿ ಅಬ್ಬರ: ಯುವರಾಜ್ ದಾಖಲೆ ಸರಿಗಟ್ಟಿದ ಪೊಲಾರ್ಡ್!
ಎರಡೂ ತಂಡಗಳು ಹೀಗಿವೆ:
ಭಾರತ: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿ.ಕೀ), ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಮೊಹಮದ್ ಸಿರಾಜ್
ಇಂಗ್ಲೆಂಡ್: ಡೊಮಿನಿಕ್ ಸಿಬ್ಲಿ, ಜಾಕ್ ಕ್ರಾಲೆ, ಜಾನಿ ಬೈರ್‌ಸ್ಟೋವ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಆಲ್ಲಿ ಪೋಪ್, ಬೆನ್ ಫೋಕ್ಸ್ (ವಿ.ಕೀ), ಡೇನಿಯಲ್ ಲಾರೆನ್ಸ್, ಡೊಮಿನಿಕ್ ಬೆಸ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್