ಮ್ಯಾಂಚೆಸ್ಟರ್: ಬೆನ್ ಸ್ಟೋಕ್ಸ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಕೇವಲ 19 ಓವರ್ಗಳಲ್ಲಿ 129 ರನ್ಗಳಿಸಿದ ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿಕೊಂಡಿದ್ದು, ವಿಂಡೀಸ್ 312 ರನ್ಗಳ ಟಾರ್ಗೆಟ್ ನೀಡಿದೆ.
4ನೇ ದಿನದಂತ್ಯಕ್ಕೆ 8 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 37 ರನ್ಗಳಿಸಿದ್ದ ಇಂಗ್ಲೆಂಡ್ ತಂಡ ಇಂದು 11 ಓವರ್ಗಳ ಆಟವಾಡಿ 92 ರನ್ಗಳಿಸಿತು. ಆರಂಭಿಕನಾಗಿ ಬಡ್ತಿ ಪಡೆದಿದ್ದ ಸ್ಟೋಕ್ಸ್ ಕೇವಲ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 78 ರನ್ ಸಿಡಿಸಿದರು. ಇವರಿಗೆ ಸಾತ್ ನೀಡಿದ ಜೋ ರೂಟ್ 33 ಎಸೆತಗಳಲ್ಲಿ 22 ರನ್ಗಳಿಸಿದರು.
ಮೊದಲ ಇನ್ನಿಂಗಸ್ನಲ್ಲಿ 182 ರನ್ಗಳ ಮುನ್ನಡೆ ಸಾಧಿಸಿದ್ದ ಇಂಗ್ಲೆಂಡ್ ಇದೀಗ ಒಟ್ಟಾರೆ 311 ರನ್ಗಳ ಮುನ್ನಡೆ ಪಡೆದಿದ್ದು ವಿಂಡೀಸ್ಗೆ 312 ರನ್ಗಳ ಟಾರ್ಗೇಟ್ ನೀಡಿದೆ. ಇಂದು ಕೊನೆಯ ದಿನವಾಗಿದ್ದು 85 ಓವರ್ಗಳ ಆಟ ಬಾಕಿಯಿದೆ.
ಈಗಾಗಲೆ ಮೊದಲ ಟೆಸ್ಟ್ ಗೆದ್ದು 1-0ಯಲ್ಲಿ ಇನ್ನಿಂಗ್ಸ್ ಮುನ್ನಡೆ ಪಡೆದಿರುವ ವೆಸ್ಟ್ ಇಂಡೀಸ್ ಡ್ರಾ ಸಾಧಿಸುವ ಆಲೋಚನೆಯಲ್ಲಿದ್ದರೆ, ಇತ್ತ ಸರಣಿ ಗೆಲ್ಲಬೇಕಾದರೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಇಂಗ್ಲೆಂಡ್ ತಂಡವಿದೆ. 4ನೇ ದಿನದಾಟದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಆಲೌಟ್ ಮಾಡಲು ಯಶಸ್ವಿಯಾಗಿದ್ದ ಇಂಗ್ಲೆಂಡ್ ವೇಗಿಗಳು ಕೊನೆಯ ದಿನ ಕಮಾಲ್ ಮಾಡಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.