ರಾಂಚಿ : ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 1800 ರೂಪಾಯಿ ಬಾಕಿ ಮೊತ್ತವನ್ನು ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ಗೆ ನೀಡಬೇಕೆಂಬ ವಿಷಯ ದೊಡ್ಡ ವಿವಾದಕ್ಕೆ ಸಿಲುಕುತ್ತಿದೆ.
ಜಾರ್ಖಂಡ್ ರಾಜ್ಯ ಕ್ರಿಕೆಟ್ ಬೋರ್ಡ್‌ಗೆ ಧೋನಿ ₹1,800 ನೀಡಬೇಕೆಂದು ವರದಿ ಬಹಿರಂಗಗೊಳ್ಳುತ್ತಿದ್ದಂತೆ ಹಲವಾರು ಶಾಲಾ ವಿಧ್ಯಾರ್ಥಿಗಳು ಹಾಗೂ ಅಭಿಮಾನಿಗಳು ಆ ಹಣವನ್ನು ಡ್ರಾಫ್ಟ್ ಮೂಲಕ ಜೆಎಸಿಎಗೆ ತಲುಪಿಸಲು ಪ್ರಯತ್ನಿಸಿದ್ದು, ವಿವಾದದ ಬೆಂಕಿಗೆ ತುಪ್ಪ ಸುರಿದಂತಾಗಿದೆ. ನಂತರ ಮಾಜಿ ಕ್ರಿಕೆಟಿಗ ಶೇಶ್ ನಾಥ್ ಪಾಠಕ್ ನೇತೃತ್ವದಲ್ಲಿ ಜೆಎಸಿಎ ಕಚೇರಿಗೆ ತೆರಳಿ ಡ್ರಾಫ್ಟ್ ಮೂಲಕ ಹಣವನ್ನು ಸಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ, ಅದನ್ನು ಅಧಿಕಾರಿಗಳು ಸ್ವೀಕರಿಸಿಲ್ಲ ಎಂದು ತಿಳಿದು ಬಂದಿದೆ.
ಈ ಕುರಿತು ಮಾತನಾಡಿರುವ ಜೆಎಸಿಎ ಕಾರ್ಯದರ್ಶಿ ಸಂಜಯ್ ಸಹಯ್, ನಾವು ಆ ಕರಡು(ಡ್ರಾಫ್ಟ್) ಸ್ವೀಕರಿಸಿಲ್ಲ ಎಂದು ದೃಢಪಡಿಸಿದ್ದಾರೆ. ಆದರೆ, ಧೋನಿ ಬಾಕಿ ಹಣವನ್ನು ಪಾವತಿಸಿಬೇಕೆಂದು ವಿವಾದಕ್ಕಾಗಿ ನಾವು ಹೇಳಲಿಲ್ಲ. ಬಾಕಿ ಹಣ ಯಾವುದೆಂದು ಧೋನಿಗೆ ಮಾತ್ರ ತಿಳಿಸಿದ್ದೇವೆ. ಆದರೆ, ಅಸ್ಪಷ್ಟತೆಯಿಂದ ಊಹಾಪೋಹಗಳಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಮಾರ್ಚ್ 31ರಂದು ಜೆಎಸಿಎ 2019-20ರ ವಾರ್ಷಿಕ ಅವಧಿಯಲ್ಲಿ 1,800 ರೂ. ಬಾಕಿ ಹಣವನ್ನು ರಾಂಚಿ ಮೂಲದ ಭಾರತದ ಅತ್ಯಂತ ಯಶಸ್ವಿ ನಾಯಕರೊಬ್ಬರು ಉಳಿಸಿಕೊಂಡಿದ್ದಾರೆ ಎಂದು ವರದಿ ಪ್ರಕಟಿಸಿತ್ತು. ಆದರೆ, ಆ ವರದಿಯಲ್ಲಿ ಬೇರೇನು ಮಾಹಿತಿ ನೀಡಿರಲಿಲ್ಲ. ಸಹಯ್ ಇದರ ಬಗ್ಗೆ ಸ್ಪಷ್ಟಪಡಿಸಿದ್ದು, ಧೋನಿ ಜೆಎಸ್ಸಿಎನ ಅಜೀವ ಸದಸ್ಯತ್ವಕ್ಕಾಗಿ ₹10 ಸಾವಿರ ಹಣ ನೀಡಿದ್ದಾರೆ. ಆದರೆ, ಅವರು ನೀಡಬೇಕಿರುವುದು ಜಿಎಸ್ಟಿ 1,800 ರೂ. ಎಂದು ತಿಳಿಸಿದ್ದಾರೆ.
ಅಕ್ಟೋಬರ್ 31ರಂದು ಬೋರ್ಡ್ನ ಪ್ರತಿನಿಧಿ ಸದಸ್ಯತ್ವದ ಹಣ ₹10 ಸಾವಿರ ಶುಲ್ಕವನ್ನು ಸಂಗ್ರಹಿಸಲು ರಾಂಚಿಯ ಧೋನಿ ಮನೆಗೆ ಹೋಗಿದ್ದರು ಎಂದು ಜಾರ್ಖಂಡ್ ಕ್ರಿಕೆಟ್ ವಲಯಗಳಲ್ಲಿ ಹೇಳಲಾಗುತ್ತಿದೆ. ಆ ಸಮಯದಲ್ಲಿ ₹10 ಸಾವಿರ ಸದಸ್ಯತ್ವದ ಶುಲ್ಕದ ಬದಲಾಗಿ ಜಿಎಸ್ಟಿ ಸಹಿತ ₹11,800 ಚೆಕ್ ಕೇಳಬಹುದಿತ್ತು. ಅಂದು ಮಾಹಿತಿ ನೀಡದೆ, ಇಂದು ಏಕೆ ಧೋನಿ ಹೆಸರನ್ನು ತರಲಾಗುತ್ತಿದೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.
ಆದರೆ, ಸಹಯ್ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ತಮ್ಮ ಬಳಿ ಯಾವುದೇ ಮಾಹಿತಿಯಿಲ್ಲ ಎಂದಿದ್ದಾರೆ. ಧೋನಿಗೆ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.