ನೇಪಿಯರ್: ನ್ಯೂಜಿಲ್ಯಾಂಡ್ ವಿರುದ್ಧ ನಡೆದ 4ನೇ ಟಿ20 ಪಂದ್ಯದಲ್ಲಿ ಡೇವಿಡ್ ಮಲನ್ ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಇಂಗ್ಲೆಂಡ್ ಪರ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಸರಣಿ ಉಳಿಸಿಕೊಳ್ಳಲು ನಿರ್ಣಾಯಕವೆನಿಸಿದ್ದ ಪಂದ್ಯದಲ್ಲಿ ಅಬ್ಬರಿಸಿದ ಡೇವಿಡ್ ಮಲನ್ ಹಾಗೂ ನಾಯಕ ಇಯೋನ್ ಮಾರ್ಗನ್ ಕಿವೀಸ್ ಬೌಲರ್ಗಳನ್ನು ಬೆಂಡೆತ್ತಿದರು. ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸಿದ ಮಲನ್ ಒಟ್ಟಾರೆ 51 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 9 ಬೌಂಡರಿ ನೆರವಿನಿಂದ 103 ರನ್ಗಳಿಸಿ ಔಟಾಗದೆ ಉಳಿದರು. ಮಾರ್ಗನ್ 41 ಎಸೆತಗಳಲ್ಲಿ ತಲಾ 7 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 91 ರನ್ಗಳಿಸಿ ದಾಖಲೆಯ 241 ರನ್ಗಳ ಬೃಹತ್ ಮೊತ್ತಕ್ಕೆ ಕಾರಣರಾದರು. ಆರಂಭಿಕ ಟಾಮ್ ಬ್ಯಾಂಟನ್ 31 ರನ್ಗಳಿಸಿದರು.
ಮಲನ್ ದಾಖಲೆ:
ಈ ಪಂದ್ಯದಲ್ಲಿ 48 ಎಸೆತಗಳಲ್ಲಿ ಶತಕ ದಾಖಲಿಸಿದ ಡೇವಿಡ್ ಮಲನ್ ಇಂಗ್ಲೆಂಡ್ ಪರ ವೇಗದ ಶತಕವೀರ ಎನಿಸಿಕೊಂಡರು. ಈ ಮೊದಲು 2014ರಲ್ಲಿ ಅಲೆಕ್ಸ್ ಹೇಲ್ಸ್ ಶ್ರೀಲಂಕಾ ವಿರುದ್ಧ 60 ಎಸೆತಗಳಲ್ಲಿ ಶತಕ ಸಿಡಿಸಿದ ದಾಖಲೆ ಹೊಂದಿದ್ದರು.
3ನೇ ವಿಕೆಟ್ ವಿಶ್ವದಾಖಲೆಯ ಜೊತೆಯಾಟ:
ಇದೇ ಪಂದ್ಯದಲ್ಲಿ ಇಯೋನ್ ಮಾರ್ಗನ್ ಹಾಗೂ ಡೇವಿಡ್ ಮಲನ್ ಮೂರನೇ ವಿಕೆಟ್ಗೆ 182 ರನ್ಗಳ ಜೊತೆಯಾಟ ನಡೆಸುವ ಮೂಲಕ ಟಿ-20 ಕ್ರಿಕೆಟ್ನಲ್ಲಿ ಮೂರನೇ ವಿಕೆಟ್ಗೆ ಅತಿ ಹೆಚ್ಚು ರನ್ ಜೊತೆಯಾಟ ನಡೆಸಿದ ದಾಖಲೆಗೆ ಪಾತ್ರರಾದರು. 2014ರಲ್ಲಿ ಅಲೆಕ್ಸ್ ಹೇಲ್ಸ್ ಹಾಗೂ ಮಾರ್ಗನ್ 3ನೇ ವಿಕೆಟ್ಗೆ 152 ರನ್ಗಳಿಸಿದ್ದ ದಾಖಲೆ ಮುರಿದುಬಿದ್ದಿದೆ.
ವೇಗದ ಅರ್ಧಶತಕ:
ಇದೇ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಇಯಾನ್ ಮಾರ್ಗನ್ ಇಂಗ್ಲೆಂಡ್ ಪರ ವೇಗದ ಅರ್ಧಶತಕ ಸಿಡಿಸಿದ ದಾಖಲೆಗೆ ಪಾತ್ರರಾದರು.
242 ರನ್ಗಳ ಟಾರ್ಗೆಟ್ ಪಡೆದ ನ್ಯೂಜಿಲ್ಯಾಂಡ್ 16.5 ಓವರ್ಗಳಲ್ಲಿ 165 ರನ್ಗಳಿಗೆ ಆಲೌಟ್ ಆಗುವ ಮೂಲಕ 76ರನ್ಗಳ ಸೋಲನುಭವಿಸಿತು.