ನವದೆಹಲಿ: ಜನರು ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಗೆ ಹೋಲಿಸಿದರೆ ಕ್ರಿಕೆಟ್ ತುಂಬಾ ಸಣ್ಣ ವಿಷಯವಾಗಿದೆ. ಈ ಸಮಯದಲ್ಲಿ ನಾನು ಕ್ರಿಕೆಟ್ ಬಗ್ಗೆ ಯೋಚಿಸುತ್ತಿಲ್ಲ ಎಂದು ಟೀಂ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಕಳೆದ 15 ದಿನಗಳಿಂದ ಕ್ರಿಕೆಟ್ ನನ್ನ ಮನಸ್ಸಿನ ಹತ್ತಿರಕ್ಕೂ ಸುಳಿಯುತ್ತಿಲ್ಲ. ದೇಶದ ಮುಂದೆ ಕ್ರಿಕೆಟ್ ಬಹಳ ಸಣ್ಣ ವಿಚಾರವಾಗಿದೆ. ಕ್ರಿಕೆಟ್ ಮತ್ತು ಐಪಿಎಲ್ ಬಗ್ಗೆ ಯೋಚಿಸುತ್ತಿದ್ದರೆ ನಾನು ಸ್ವಾರ್ಥಿಯಾಗುತ್ತೇನೆ. ನಮ್ಮ ಆದ್ಯತೆ ಆರೋಗ್ಯವಾಗಿರಬೇಕು. ನಾವು ಸುರಕ್ಷಿತ ಮತ್ತು ಆರೋಗ್ಯವಾಗಿದ್ದರೆ ಮಾತ್ರ ಕ್ರೀಡೆ ನಡೆಯುತ್ತದೆ. ಕ್ರಿಕೆಟ್ ನನ್ನ ಆಲೋಚನೆಯಲ್ಲಿಲ್ಲ ಎಂದಿದ್ದಾರೆ.
ಇದು ದೇಶದ ನಾಗರಿಕರೆಲ್ಲರೂ ಒಗ್ಗಟ್ಟಿನಿಂದ ಇರಬೇಕಾದ ಸಮಯ. ದೇಶವನ್ನು ಸುರಕ್ಷಿತವಾಗಿಡಲು ನಿಮ್ಮ ಕೈಯಲ್ಲಾದ ಪ್ರಯತ್ನ ಮಾಡಿ ಎಂದು ಸಲಹೆ ನೀಡಿದ್ದಾರೆ. ದಿನಗೂಲಿ ನೌಕರರ ಬಗ್ಗೆ ಅನುಕಂಪ ವ್ಯಕ್ತಪಡಿಸಿರುವ ಕ್ರಿಕೆಟಿಗ, ಅವರು ತಮ್ಮ ಮನೆಗಳಿಗೆ ತೆರಳಲು ನಗರಗಳನ್ನು ತೊರೆಯುತ್ತಿದ್ದಾರೆ. ಲಾಕ್‌ಡೌನ್ ಘೋಷಿಸುವ ಮೊದಲು ಸರ್ಕಾರ ಅವರಿಗೆ ಏನಾದರೂ ವ್ಯವಸ್ಥೆ ಮಾಡಬೇಕಾಗಿತ್ತು ಎಂದಿದ್ದಾರೆ.