ನವದೆಹಲಿ: ಕೋವಿಡ್ -19 ಸೋಂಕಿಗೆ ತುತ್ತಾಗಿದ್ದ ದೆಹಲಿಯ ಮಾಜಿ ಕ್ರಿಕೆಟಿಗ ಸಂಜಯ್ ದೋಬಲ್ ನಿಧನ ಹೊಂದಿದ್ದಾರೆ ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘ (ಡಿಡಿಸಿಎ) ಖಚಿತಪಡಿಸಿದೆ.
'ಸಂಜಯ್ ದೋಬಲ್ ಅವರ ಅಕಾಲಿಕ ಮರಣವು ಕ್ರಿಕೆಟ್ ಜಗತ್ತಿಗೆ ಆಘಾತಕಾರಿ ಸುದ್ದಿಯಾಗಿದೆ' ಎಂದು ಡಿಡಿಸಿಎ ಕಾರ್ಯದರ್ಶಿ ವಿನೋದ್ ತಿಹಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 'ಡಿಡಿಸಿಎ ಪರವಾಗಿ, ಸಂಜಯ್ ದೋಬಲ್ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತೇನೆ. ಈ ದುಃಖದ ಸಮಯದಲ್ಲಿ ದೇವರು ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಕೇಳಿಕೊಳ್ಳುತ್ತೇನೆ' ಎಂದಿದ್ದಾರೆ.
ತೀವ್ರ ನ್ಯುಮೋನಿಯಾದಿಂದ ಬಳಲುತ್ತಿದ್ದ ದೋಬಲ್ ಅವರಿಗೆ ಕಳೆದ ಮೂರು ವಾರಗಳ ಹಿಂದೆ ಕೊರೊನಾ ಸೋಂಕು ತಗುಲಿರುವುದು ಕಂಡುಬಂದಿತ್ತು.
ನನ್ನ ಸ್ನೇಹಿತ ಸಂಜಯ್ ದೋಬಲ್ ಅವರು ನ್ಯುಮೋನಿಯಾದ ಬಳಲುತ್ತಿದ್ದರು. ಮೂರು ವಾರಗಳ ಹಿಂದೆ ಅವರಿಗೆ ಕೊರೊನಾ ಸೋಕು ತಗುಲಿರುವುದು ಗೊತ್ತಾಗಿತ್ತು. ನ್ಯುಮೋನಿಯಾ ಕಾರಣದಿಂದ ಅವರ ಶ್ವಾಸಕೋಶಕ್ಕೆ ಹಾನಿಯಾಗಿತ್ತು, ಆದ್ದರಿಂದ ವೈದ್ಯರು ಪ್ಲಾಸ್ಮಾ ಚಿಕಿತ್ಸೆಗೆ ಸೂಚಿಸಿದ್ದರು. ಹೀಗಾಗಿ ನಾವು ಕನಿಷ್ಟ 20 ದಿನಗಳ ಹಿಂದೆ ಕೋವಿಡ್-19 ನಿಂದ ಚೇತರಿಸಿಕೊಂಡ ಮತ್ತು ರಕ್ತದಾನ ಮಾಡಲು ಸಿದ್ಧರಿರುವ ರೋಗಿಯನ್ನು ಹುಡುಕುತ್ತಿದ್ದೆವು ಎಂದು ದೆಹಲಿ ಕ್ರಿಕೆಟಿಗ ಮಿಥುನ್ ಮನ್ಹಾಸ್ ಅವರ ಸ್ಥಿತಿಯ ಬಗ್ಗೆ ತಿಳಿಸಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್ ಮತ್ತು ಆಕಾಶ್ ಚೋಪ್ರಾ ಜನರು ಮುಂದೆ ಬಂದು ದೋಬಲ್‌ಗೆ ಸಹಾಯ ಮಾಡಬೇಕೆಂದು ಜಾಲತಾಣದಲ್ಲಿ ಮನವಿ ಮಾಡಿದ್ದರು.