ಮುಂಬೈ : ಮುಂಬರುವ ಐಪಿಎಲ್‌ಗಿಂತ ಮುನ್ನ ತಮ್ಮ ಬ್ಯಾಟಿಂಗ್ ಸುಧಾರಿಸುವತ್ತ ಕೆಲಸ ಮಾಡುತ್ತಿದ್ದೇನೆ ಎಂದು ದೆಹಲಿ ಕ್ಯಾಪಿಟಲ್ಸ್ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಬುಧವಾರ ಹೇಳಿದ್ದಾರೆ. ತಂಡದಲ್ಲಿ ಅವಶ್ಯಕತೆ ಇದ್ದಾಗ ಬ್ಯಾಟ್ ಮೂಲಕ ನೆರವಾಗುವುದಕ್ಕೆ ಗಮನ ನೀಡುವುದಕ್ಕಾಗಿ ಕೋಚ್‌ಗಳು ತಿಳಿಸಿದ್ದಾರೆಂದು ಮಿಶ್ರಾ ಹೇಳಿದ್ದಾರೆ.
ಮುಂಬೈಗೆ ಬಂದು ಸೇರಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೆಲ ಸದಸ್ಯರು ಬುಧವಾರ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ಮೊದಲ ಅಭ್ಯಾಸ ಸೆಷನ್ ನಡೆಸಿದ್ದಾರೆ. ಎಲ್ಲಾ ಆಟಗಾರರು ಮೊದಲ ಸೆಷನ್‌ನಲ್ಲೇ ಉತ್ತಮವಾಗಿ ಕಾಣುತ್ತಿದ್ದರು ಎಂದು ಮಿಶ್ರಾ ತಿಳಿಸಿದ್ದಾರೆ.
"ಮೈದಾನದಲ್ಲಿ ಎಲ್ಲಾ ಹುಡುಗರು ಉತ್ತಮವಾಗಿ ಕಾಣುತ್ತಿದ್ದರು. ತಂಡಕ್ಕಾಗಿ ಕಠಿಣ ಶ್ರಮವಹಿಸಲು ಸಿದ್ಧರಾಗಿದ್ದಾರೆ. ಯುವ ಆಟಗಾರರು ಈ ರೀತಿ ಕಠಿಣ ತರಬೇತಿ ನಡೆಸುವುದನ್ನು ನೋಡುವುದಕ್ಕೆ ಖುಷಿಯಾಗುತ್ತದೆ ಎಂದು ಮಿಶ್ರಾ ಹೇಳಿದ್ದಾರೆ.
37 ವರ್ಷದ ಲೆಗ್ ಸ್ಪಿನ್ನರ್ ತಾವೂ ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲಿ ಸುಧಾರಿಸಲು ಗಮನ ನೀಡುತ್ತಿರುವುದಾಗಿ ತಿಳಿಸಿದ್ದಾರೆ. "ನಾನು ಬ್ಯಾಟಿಂಗ್ ಸುಧಾರಿಸಲು ಕೆಲಸ ಮಾಡುತ್ತಿದ್ದೇನೆ. ಕೋಚ್‌ಗಳು ಕೂಡ ಬ್ಯಾಟಿಂಗ್ ಅಭ್ಯಾಸದ ಕಡೆಗೆ ಗಮನ ನೀಡಲು ಹೇಳಿದ್ದಾರೆ.
ಕೆಲ ಸಂದರ್ಭದಲ್ಲಿ ತಂಡಕ್ಕೆ 25-30ರನ್ಗಳ ಜೊತೆಯಾಟ ನೀಡಿದರೆ ತಂಡಕ್ಕೆ ಅನುಕೂಲವಾಗಲಿದೆ. ಅಲ್ಲದೆ ತಂಡಕ್ಕಾಗಿ ಅಗತ್ಯವಾದ ಎಲ್ಲವನ್ನು ಮಾಡಲು ಸಿದ್ಧನಿದ್ದೇನೆ" ಎಂದು ಹೇಳಿದ್ದಾರೆ. ಟೆಲ್ಲಿ ಕ್ಯಾಪಿಟಲ್ಸ್ ತಂಡ ಏಪ್ರಿಲ್ 10ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಮ್ಮ ಅಭಿಯಾನ ಆರಂಭಿಸಲಿದೆ.
ಇದನ್ನು ಓದಿ:ರಿಷಭ್ ಪಂತ್ ಮಾಂತ್ರಿಕ ನಾಯಕರಾಗಲಿದ್ದಾರೆ: ಸುರೇಶ್ ರೈನಾ ಭವಿಷ್ಯ