ಲಂಡನ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ಸೋಲು ಕಂಡ ಬಳಿಕ ಟೀಂ ಇಂಡಿಯಾ ಬೌಲಿಂಗ್ ವಿಭಾಗ ಸಿಕ್ಕಾಪಟ್ಟೆ ಟೀಕೆಗೊಳಗಾಗಿತ್ತು. ಇದಾದ ಬಳಿಕ ಫಿನಿಕ್ಸ್ ಪಕ್ಷಿಯಂತೆ ಪುಟಿದೆದ್ದು, ಟೀಂ ಇಂಡಿಯಾ ಬೌಲಿಂಗ್ ವಿಭಾಗ ಅಬ್ಬರಿಸುತ್ತಿದೆ.
ಈ ಹಿಂದೆ ಲಂಡನ್ನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಧ್ಯಮ ಕ್ರಮಾಂಕದ ಬೌಲರ್ಗಳು ವಿಕೆಟ್ ಪಡೆದುಕೊಳ್ಳಲು ಪರದಾಡಿದ್ದರಿಂದ ಭಾರತ ಹೀನಾಯ ಸೋಲು ಕಂಡಿತ್ತು. ಅದಾದ ಬಳಿಕ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಯಜುವೇಂದ್ರ ಚಹಲ್ ಹಾಗೂ ಕುಲ್ದೀಪ್ ಯಾದವ್ಗೆ ಪ್ರತಿ ಪಂದ್ಯದಲ್ಲೂ ಆಡುವ 11ರ ಬಳಗದಲ್ಲಿ ಚಾನ್ಸ್ ನೀಡುತ್ತಿದೆ. ಈ ಜೋಡಿ ಈಗಾಗಲೇ ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಸೇರಿದಂತೆ ವಿವಿಧ ತಂಡಗಳ ವಿರುದ್ಧ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದೆ.
ಕುಲ್ದೀಪ್-ಚಹಲ್ ಏಕದಿನ ಸಾಧನೆ
ಪಂದ್ಯ | ವಿಕೆಟ್ | ಸರಾಸರಿ | ಅತ್ಯುತ್ತಮ | 4ವಿಕೆಟ್ | 5ವಿಕೆಟ್ | ಸ್ಟ್ರೈಕ್ ರೇಟ್ | ಎಕಾನಮಿ | |
ಯಾದವ್ | 31 | 63 | 21.14 | 6/25 | 4 | 1 | 25.7 | 4.93 |
ಚಹಲ್ | 31 | 49 | 28.32 | 5/22 | 2 | 1 | 32.9 | 5.15 |
ಕಳೆದ ಎರಡು ವರ್ಷಗಳಲ್ಲಿ ಕುಲ್ದೀಪ್ ಸಾಧನೆ
2018 | 19 | 45 | 17.77 | 6/25 | 2 | 01 | 22.09 | 4.64 |
2019 | 14 | 23 | 29.56 | 4/39 | 2 | 0 | 33.01 | 5.35 |
ಕಳೆದ ಎರಡು ವರ್ಷಗಳಲ್ಲಿ ಚಹಲ್ ಸಾಧನೆ
2018 | 17 | 29 | 26.00 | 5/22 | 1 | 1 | 32.03 | 4.82 |
2019 | 10 | 22 | 23.04 | 6/24 | 1 | 1 | 24.00 | 5.76 |
ಇನ್ನು ಪಾಕ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲೂ ಈ ಜೋಡಿಯ ಬೌಲಿಂಗ್ ಮುಂದೆ ಪಾಕ್ ಹರಸಾಹಸ ಪಡುವಂತಾಯಿತು. ಚಹಲ್ ಯಾವುದೇ ವಿಕೆಟ್ ಪಡೆದುಕೊಳ್ಳದಿದ್ದರೂ, ಕುಲ್ದೀಪ್ಗೆ ಉತ್ತಮ ಸಾಥ್ ನೀಡಿದ್ದರಿಂದ ಪಾಕ್ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಲು ಸಾಧ್ಯವಾಯಿತು.
ಟೀಂ ಇಂಡಿಯಾ ನೀಡಿದ್ದ 336ರನ್ಗಳ ಗುರಿ ಬೆನ್ನತ್ತಿದ್ದ ಪಾಕ್ ಆರಂಭದಲ್ಲೇ ಆಘಾತ ಅನುಭವಿಸಿದ್ದರೂ, ಫಖಾರ್ ಜಮಾನ್(62) ಹಾಗೂ ಬಾಬರ್ ಅಜಂ(48) ಜೋಡಿ ಅದ್ಭುತವಾಗಿ ಆಡಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು.
ಈ ವೇಳೆ ದಾಳಿಗಿಳಿದಿದ್ದ ಚೈನಾಮ್ಯಾನ್ ಖ್ಯಾತಿಯ ಕುಲ್ದೀಪ್ ಇವರಿಬ್ಬರಿಗೂ ಪೆವಿಲಿಯನ್ ಹಾದಿ ತೋರಿಸಿ, ತಂಡಕ್ಕೆ ಮೆಲುಗೈ ತಂದುಕೊಟ್ಟರು. ಇದಾದ ಬಳಿಕ ಹಾರ್ದಿಕ್ ಪಾಂಡ್ಯ ಹಾಗೂ ವಿಜಯ್ ಶಂಕರ್ ಪಾಕ್ ವಿಕೆಟ್ ಪಡೆದು ಟೀಂ ಇಂಡಿಯಾ ತಂಡವನ್ನ ಸುಲಭವಾಗಿ ಗೆಲುವಿನ ದಡ ಸೇರುವಂತೆ ಮಾಡಿದ್ದರು. ಒಟ್ಟಿನಲ್ಲಿ ಟೀಂ ಇಂಡಿಯಾ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಲು ಚಹಲ್, ಕುಲ್ದೀಪ್ ಕೊಡುಗೆ ಸಹ ಬಹಳಷ್ಟಿದೆ ಎಂದರೆ ಸುಳ್ಳಲ್ಲ.