ಹೈದರಾಬಾದ್: ಒಂದು ವೇಳೆ ಈ ಬಾರಿಯ ಐಪಿಎಲ್ ನಡೆಯದೇ ಇದ್ದರೆ, ಬಿಸಿಸಿಐಗೆ ಸುಮಾರು 4,000 ಕೋಟಿ ರೂ. ನಷ್ಟವಾಗಲಿದೆಯಂತೆ.
ಕೊರೊನಾ ರೌದ್ರ ನರ್ತನದಿಂದಾಗಿ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತೋ ಇಲ್ವೋ ಎಂಬ ಬಗ್ಗೆ ಕ್ರಿಕೆಟ್ ಪ್ರಿಯರಿಗೆ ಭಾರೀ ನಿರಾಸೆ ಮೂಡಿಸಿತ್ತು. ಒಂದು ಹಂತದಲ್ಲಿ ರದ್ದಾಗುವ ಹಂತದಲ್ಲಿದ್ದ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಮತ್ತೆ ನಡೆಯುವ ಹಂತದಲ್ಲಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಈ ಬಾರಿಯ ಐಪಿಎಲ್ ಆತಿಥ್ಯ ವಹಿಸಲಿದ್ದು, ಸೆಪ್ಟೆಂಬರ್ 19 ರಿಂದ ನವೆಂಬರ್ 8 ರವರೆಗೆ ಪೂರ್ಣ ಪ್ರಮಾಣದ ಐಪಿಎಲ್‌ನ ಯುಎಇಯಲ್ಲೇ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಐಪಿಎಲ್ ಸೆಪ್ಟೆಂಬರ್ 26 ರಿಂದ ಪ್ರಾರಂಭವಾಗುವ ಸಾಧ್ಯತೆಯೂ ಇದೆ ಎಂಬ ವರದಿಗಳಿವೆ.
ಒಂದು ವೇಳೆ, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯದಿದ್ದರೆ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಸುಮಾರು 4,000 ಕೋಟಿ ರೂ. ನಷ್ಟವಾಗಲಿದೆಯಂತೆ.
ಕಳೆದ ಮಾರ್ಚ್ 29 ರಿಂದ ಐಪಿಎಲ್ ಆರಂಭವಾಗಬೇಕಿತ್ತು. ಆದರೆ, ಕೋವಿಡ್-19 ಹರಡಿದ ಹಿನ್ನೆಲೆಯಲ್ಲಿ ಕ್ರಿಕೆಟ್ ಹಬ್ಬಕ್ಕೆ ತಡೆ ನೀಡಲಾಗಿತ್ತು. ಈಗಾಗಲೇ ಅಕ್ಟೋಬರ್-ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಪುರುಷರ ಟಿ-20 ವಿಶ್ವಕಪ್ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಂದೂಡಿದೆ.