ಅಬುಧಾಬಿ : ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯ ಆಕರ್ಷಕ ಅರ್ಧಶತಕ ಸಿಡಿಸಿ ರಾಜಸ್ಥಾನ್ಗೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ಜೋಸ್ ಬಟ್ಲರ್ರನ್ನು ನಾಯಕ ಸ್ಮಿತ್ ಎಬಿಡಿ ಮತ್ತು ಪೊಲಾರ್ಡ್ಗೆ ಹೋಲಿಕೆ ಮಾಡಿ ಮ್ಯಾಚ್ ವಿನ್ನರ್ ಎಂದು ಹೊಗಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ನಂತರ ಮಾತನಾಡಿದ ಸ್ಮಿತ್, ಆತ ಯಾರಿಗೂ 2ನೇ ಆಟಗಾರನಲ್ಲ(ಹೋಲಿಕೆ ಮಾಡುವುದಕ್ಕೆ), ಆತನನ್ನು ಹೊಂದಿರುವುದಕ್ಕೆ ನಾವು ಅದೃಷ್ಟವಂತರು. ಅವರ ಬ್ಯಾಟಿಂಗ್‌ನಲ್ಲಿ ತುಂಬಾ ಬುದ್ದಿವಂತಿಕೆಯಿದೆ ಎಂದು ಸ್ಮಿತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಿಂದಿನ ಕೆಲವು ಪಂದ್ಯಗಳಲ್ಲಿ ಟಾಪ್ ಆರ್ಡರ್ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿದಿದ್ದ ಬಟ್ಲರ್ ಸಿಎಸ್ಕೆ ವಿರುದ್ಧ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದರು. ಇದು ತಂಡದ ಸಮತೋಲನಕ್ಕಾಗಿ ಮಾಡಲಾಗಿದೆ ಎಂದು ಆಸೀಸ್ ಆಟಗಾರ ತಿಳಿಸಿದ್ದಾರೆ.
ಅವರು ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿರುವುದು ಆಸಕ್ತಿದಾಯಕವಾಗಿದೆ. ಯಾಕೆಂದರೆ, ಜೋಸ್ ನಂಬಲಸಾಧ್ಯವಾದ ಟಾಪ್ ಆರ್ಡರ್ ಬ್ಯಾಟ್ಸ್ಮನ್. ಆದರೆ, ಅವರು ಎಬಿಡಿ, ಪೊಲಾರ್ಡ್ ಹಾಗೂ ಪಾಂಡ್ಯ ರೀತಿಯಲ್ಲಿ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಅಂತಹ ಬ್ಯಾಟ್ಸ್ಮನ್ರನ್ನು ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲೇಳುವುದು ತುಂಬಾ ಕಷ್ಟವಾಗುತ್ತದೆ. ಆದರೆ, ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಲು ಅನಿವಾರ್ಯವಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಸಿಎಸ್ಕೆ ವಿರುದ್ಧ 28 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ ಇಳಿದಿದ್ದ ಜೋಸ್ ಬಟ್ಲರ್ ಕೇವಲ 48 ಎಸೆತಗಳಲ್ಲಿ ಅಜೇಯ 70 ರನ್ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.