ನವದೆಹಲಿ: 'ತಮ್ಮ ಅಸಾಂಪ್ರದಾಯಿಕ ಬೌಲಿಂಗ್ ಶೈಲಿಯಲ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಅವರು ಮುಂದುವರಿಯುವುದು ಅಸಾಧ್ಯ. ಒಂದು ವೇಳೆ ಮುಂದುವರಿದರೆ ಅವರು ಖಂಡಿತ ಸೊಂಟದ ಸಮಸ್ಯೆಗೆ ಒಳಗಾಗಲಿದ್ದಾರೆ' ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.
ಬುಮ್ರಾ ಅತ್ಯಂತ ಕಠಿಣ ಬೌಲಿಂಗ್ ಆ್ಯಕ್ಷನ್ ಹೊಂದಿದ್ದಾರೆ. ಇದರಿಂದ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಆಡಲು ಸಾಧ್ಯವಿಲ್ಲ ಎಂದು ಆಕಾಶ್ ಚೋಪ್ರಾರ ಆಕಾಶ್ ವಾಣಿ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸುತ್ತಿರುವುದಕ್ಕೆ ಅವರ ಧೈರ್ಯವನ್ನು ಮೆಚ್ಚಲೇಬೇಕು. ಆತ ತುಂಬಾ ಪರಿಶ್ರಮಿ ಹಾಗೂ ಏಕಾಗ್ರತೆಯುಳ್ಳ ವ್ಯಕ್ತಿ. ಅವರಿಗೆ ತಮ್ಮ ಗುರಿ ಏನೆಂಬುದು ಗೊತ್ತಿದೆ. ಆದರೆ, ಅವರ ಸೊಂಟ ಇದಕ್ಕೆ ನೆರವಾಗುವುದಿಲ್ಲ. ಅವರ ಸೊಂಟವು ಒತ್ತಡವನ್ನು ಸಹಿಸಿಕೊಳ್ಳಲಾರದು" ಎಂದು ಅಖ್ತರ್ ಎಚ್ಚರಿಸಿದ್ದಾರೆ.
2018ರ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಬುಮ್ರಾ ನಂತರ ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು. ಆದರೆ 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಮುನ್ನ ಬುಮ್ರಾ ಬೆನ್ನು ನೋವಿಗೆ ತುತ್ತಾಗಿ ಸುಮಾರು ಮೂರು ತಿಂಗಳು ಕ್ರಿಕೆಟ್ನಿಂದ ಹೊರಗಿದ್ದರು.
'ಬುಮ್ರಾಗೆ ಸೊಂಟದ ನೋವಿನ ಸಮಸ್ಯೆ ಎದುರಾಗುವ ಮೊದಲೇ ಅವರ ಬೌಲಿಂಗ್ ಶೈಲಿಯನ್ನು ಟಿವಿಯಲ್ಲಿ ನೋಡಿ ನನ್ನ ಸ್ನೇಹಿತನಿಗೆ, ಈತ ತನ್ನ ಸೊಂಟವನ್ನು ಮುರಿದುಕೊಳ್ಳುತ್ತಾನೆ' ಎಂದು ಹೇಳಿದ್ದೆ ಎಂದು ಅಖ್ತರ್ ಹೇಳಿದ್ದಾರೆ.