ಲಂಡನ್: ಇಂಗ್ಲೆಂಡ್ ತಂಡದ ಸ್ಟಾರ್ ಅಲ್ರೌಂಡರ್ ಬೆನ್ ಸ್ಟೋಕ್ಸ್ ಕೌಟುಂಬಿಕ ಕಾರಣದಿಂದ ಪಾಕಿಸ್ತಾನ ವಿರುದ್ಧದ ಮುಂದಿನ ಎರಡು ಪಂದ್ಯಗಳಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ತಿಳಿದು ಬಂದಿದೆ.
ಈಗಾಗಲೇ ಮೊದಲ ಪಂದ್ಯ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಇಂಗ್ಲೆಂಗ್ಗೆ ಸ್ಟೋಕ್ಸ್ ಅನುಪಸ್ಥಿತಿ ಕಾಡಲಿದೆ. ಸ್ಟೋಕ್ಸ್ ಕೌಟುಂಬಿಕ ಸಮಸ್ಯೆ ಹಿನ್ನೆಲೆ ಮಾಧ್ಯಮಗಳು ಅವರ ವೈಯಕ್ತಿಕ ವಿಚಾರಗಳನ್ನು ಗೌರವಿಸಬೇಕು ಇಸಿಬಿ ತಿಳಿಸಿದೆ.
ಸ್ಟೋಕ್ಸ್ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಗೆಲ್ಲಲು ನೆರವಾಗಿದ್ದರು. ಪಾಕಿಸ್ತಾನ ವಿರುದ್ಧ ಬ್ಯಾಟಿಂಗ್ನಲ್ಲಿ ವಿಫಲವಾದರೂ ಬೌಲಿಂಗ್ನಲ್ಲಿ 2 ವಿಕೆಟ್ ಪಡೆದು ಮಿಂಚಿದ್ದರು.
ಟೆಸ್ಟ್ ಸರಣಿಯಿಂದ ಬೆನ್ ಸ್ಟೋಕ್ಸ್ ಹಿಂದೆ ಸರಿದಿರುವುದಕ್ಕೆ ಸ್ಪಷ್ಟ ಕಾರಣ ಏನು ಎಂದು ತಿಳಿದುಬಂದಿಲ್ಲವಾದರೂ ಸ್ಟೋಕ್ಸ್ ತಂದೆ ಹಾಗೂ ನ್ಯೂಜಿಲ್ಯಾಂಡ್ ಮಾಜಿ ರಗ್ಬಿ ಆಟಗಾರರಾಗಿರುವ ಗೆಡ್ ಸ್ಟೋಕ್ಸ್ ಆನಾರೋಗ್ಯದಿಂದ ಆಸ್ಪತ್ರೆಯಲ್ಲಿರುವುದರಿಂದ ಸ್ಟೋಕ್ಸ್ ನ್ಯೂಜಿಲ್ಯಾಂಡ್ಗೆ ಪ್ರಯಾಣ ಬೆಳಸಬಹುದು ಎನ್ನಲಾಗಿದೆ.
ಸ್ಟೋಕ್ಸ್ ಬದಲಿಗೆ ಸಸೆಕ್ಸ್ ಸೀಮರ್ ಒಲ್ಲಿ ರಾಬಿನ್ಸನ್ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ಆಲ್ರೌಂಡರ್ ಕ್ರಿಸ್ ವೋಕ್ಸ್ ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿರುವುದು ಇಂಗ್ಲೆಂಡ್ ತಂಡಕ್ಕೆ ಸಮಧಾನಕರ ವಿಷಯವಾಗಿದೆ. ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ 2ನೆ ಟೆಸ್ಟ್ ಪಂದ್ಯ ಆಗಸ್ಟ್ 13ರಿಂದ ಸೌತಾಂಪ್ಟನ್ನಲ್ಲಿ ಆರಂಭವಾಗಲಿದೆ.