ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನೂತನ ಉಪಾಧ್ಯಕ್ಷ ರಾಜೀವ್ ಶುಕ್ಲಾ ವಿರುದ್ಧ ಮಧ್ಯಪ್ರದೇಶದ ಕ್ರಿಕೆಟ್ ಅಸೋಸಿಯೇಷನ್ ಸದಸ್ಯ ಸಂಜೀವ್ ಗುಪ್ತಾ ಹಿತಾಸಕ್ತಿ ಸಂಘರ್ಷದ ಆರೋಪ ಮಾಡಿದ್ದಾರೆ.
ಒಬ್ಬ ವ್ಯಕ್ತಿ ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳನ್ನು ಹೊಂದಿದ್ದರೆ ಹಿತಾಸಕ್ತಿ ಸಂಘರ್ಷ ಉಂಟಾಗುತ್ತದೆ. ಇದೀಗ ಅದೇ ವಿಚಾರವಾಗಿ ಶುಕ್ಲಾ ವಿರುದ್ಧ ಗುಪ್ತಾ ಬಿಸಿಸಿಐ ಎಥಿಕ್ಸ್ ಅಧಿಕಾರಿ ಜಸ್ಟೀಸ್ ಡಿ.ಕೆ.ಜೈನ್ ಅವರಿಗೆ ದೂರು ನೀಡಿದ್ದಾರೆ.
ಬಿಸಿಸಿಐನ ನಿಯಮ 39(2)(ಬಿ)ರ ಅನ್ವಯ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ವಿರುದ್ಧ ಸಂಜೀವ್ ಗುಪ್ತಾ ನೀಡಿರುವ ಹಿತಾಶಕ್ತಿ ಆರೋಪದ ದೂರನ್ನು ಬಿಸಿಸಿಐ ನೈತಿಕ ಅಧಿಕಾರಿಗಳು ಸ್ವೀಕರಿಸಿದ್ದಾರೆ ಎಂದು ಕಚೇರಿ ಮಾಹಿತಿ ನೀಡಿದೆ.
ಅದರಂತೆ ಬಿಸಿಸಿಐ ಮತ್ತು ಶುಕ್ಲಾ ಗುರುವಾರದಿಂದ ಮುಂದಿನ 2 ವಾರಗಳ ಅವಧಿಯಲ್ಲಿ ಈ ದೂರಿಗೆ ಲಿಖಿತ ಪ್ರತಿಕ್ರಿಯೆಯನ್ನು ನೈತಿಕ ಅಧಿಕಾರಿಗಳ ಮುಂದೆ ಸಲ್ಲಿಸುವಂತೆ ಕೋರಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಆದೇಶಗಳನ್ನು ನಂತರ ರವಾನಿಸಲಾಗುವುದು ಎಂದು ನೈತಿಕ ಅಧಿಕಾರಿಗಳ ಕಚೇರಿ ತಿಳಿಸಿದೆ.
ಈ ಹಿಂದೆ ಸಂಜೀವ್ ಗುಪ್ತಾ ಭಾರತ ತಂಡದ ಮಾಜಿ ಆಟಗಾರರಾದ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ ಸೇರಿದಂತೆ ಹಲವಾರು ಕ್ರಿಕೆಟಿಗರ ವಿರುದ್ಧ ಇದೇ ರೀತಿ ಆರೋಪ ಮಾಡಿದ್ದರು.
ಇದನ್ನೂ ಓದಿ: 37 ಎಸೆತಕ್ಕೆ ಶತಕ... ಅಜರುದ್ದೀನ್ ಆಟಕ್ಕೆ ಸೆಹ್ವಾಗ್ ಫಿದಾ, ಪ್ರಶಂಸೆಯ ಸುರಿಮಳೆ