ಲಂಡನ್: ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಸೆಮಿಫೈನಲ್ನಲ್ಲಿ ಸೋಲನುಭಸಿದ ಬೆನ್ನಲ್ಲೇ ತಂಡದಲ್ಲಿ ಬಣ ರಾಜಕೀಯ ಶುರುವಾಗಿದೆ ಎಂಬ ಅನುಮಾನ ಮೂಡಿದೆ.
ವಿಂಡೀಸ್ ವಿರುದ್ಧದ ಸರಣಿಗಾಗಿ ಕೊಹ್ಲಿಗೆ ವಿಶ್ರಾಂತಿ ನೀಡಿ ರೋಹಿತ್ಗೆ ನಾಯಕತ್ವವಹಿಸಿರುವ ಬಿಸಿಸಿಐ ಮುಂದಿನ ದಿನಗಳಲ್ಲಿ ಕೊಹ್ಲಿಯನ್ನು ಟೆಸ್ಟ್ ಫಾರ್ಮೆಟ್ಗೆ ಮಾತ್ರ ನಾಯಕನಾಗಿ ಮುಂದುವರಿಸುವ ಆಲೋಚನೆಯಲ್ಲಿದೆ ಎಂಬ ಸುದ್ದಿ ಮೂಲಗಳಿಂದ ತಿಳಿದು ಬಂದಿದೆ.
ವಿಶ್ವಕಪ್ ವೇಳೆ ತಂಡದಲ್ಲಿ ಎರಡು ಬಣವಾಗಿ ವಿಂಗಡಣೆಯಾಗಿದ್ದು, ಕೊಹ್ಲಿ ಹಾಗೂ ಶಾಸ್ತ್ರಿ ಕೆಲವೊಂದು ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಮೂಲಕ ಇತರ ಆಟಗಾರರ ಅಭಿಪ್ರಾಯವನ್ನು ಕಡೆಗಣಿಸುತ್ತಿದ್ದಾರೆ. ಜೊತೆಗೆ ತಮ್ಮ ನಾಯಕತ್ವದಲ್ಲಿ ಆರ್ಸಿಬಿ ತಂಡದಲ್ಲಿರುವ ಚಹಲ್ ಹಾಗೂ ನಾಲ್ಕನೇ ಕ್ರಮಾಂಕಕ್ಕೆ ವಿಜಯ್ ಶಂಕರ್ ಅವರನ್ನು ಆಯ್ಕೆ ಮಾಡುವಾಗ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ವಿಚಾರದಲ್ಲಿ ರೋಹಿತ್ - ಕೊಹ್ಲಿ ನಡುವೆ ಬಿರುಕು ಬಿಟ್ಟಿದೆ ಎಂಬ ಗಾಳಿ ಸುದ್ದಿ ಕೇಳಿ ಬರುತ್ತಿದೆ.
ಈಗಾಗಲೇ ಐಪಿಎಲ್ನಲ್ಲಿ ಉತ್ತಮ ನಾಯಕತ್ವ ಪ್ರದರ್ಶನ ತೋರಿರುವ ರೋಹಿತ್ ಶರ್ಮಾ ಧೋನಿ ನಂತರದ ಬೆಸ್ಟ್ ಕ್ಯಾಪ್ಟನ್ ಎಂದೆನಿಸಿಕೊಂಡಿದ್ದಾರೆ. ಕೊಹ್ಲಿ ಕೂಡ ಉತ್ತಮ ನಾಯಕ ಎಂದೆನಿಸಿಕೊಂಡಿದ್ದರೂ ಅವರ ಹಿಂದೆ ಧೋನಿ ಇದ್ದರೆಂಬುದು ಗೊತ್ತಿದೆ. ಧೋನಿ ನಿವೃತ್ತಿಯಂಚಿನಲ್ಲಿರುವುದರಿಂದ ಕೊಹ್ಲಿ ಸಿಟ್ಟಿನ ವರ್ತನೆ ಮುಂದುವರಿದರೆ ತಂಡದ ಮೇಲೆ ದುಷ್ಪರಿಣಾಮ ಬೀರಬಹುದೆಂಬ ಹಿನ್ನೆಲೆಯಲ್ಲಿ 2023ರ ವಿಶ್ವಕಪ್ಗೆ ರೋಹಿತ್ ನೇತೃತ್ವದಲ್ಲಿ ತಂಡವನ್ನು ಸಿದ್ದಗೊಳಿಸಬೇಕೆಂಬುದು ಬಿಸಿಸಿಐನ ಲೆಕ್ಕಾಚಾರ ಇರಬಹುದು ಎನ್ನಲಾಗಿದೆ.
ಒಟ್ಟಾರೆ ವಿಂಡೀಸ್ ವಿರುದ್ಧದ ಸರಣಿಯಲ್ಲಿ ರೋಹಿತ್ ಶರ್ಮಾ ತಂಡವನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬುದರ ಮೇಲೆ ನಾಯಕತ್ವ ಗೊಂದಲಕ್ಕೆ ತೆರೆ ಬೀಳಲಿದೆ.