ಮುಂಬೈ: ಶ್ರೀಮಂತ ಟಿ20 ಕ್ರಿಕೆಟ್ ಟೂರ್ನಿ ಎಂದು ಕರೆಯಲ್ಪಡುವ ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಆವೃತ್ತಿಯನ್ನು ಅನಿರ್ಧಿಷ್ಟಾವಧಿವರೆಗೆ ರದ್ದುಪಡಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಅಧಿಕೃತವಾಗಿ ಮಾಹಿತಿ ನೀಡಿದೆ.
ದೊಡ್ಡಮಟ್ಟದ ಕ್ರೀಡಾಕೂಟ ಆಯೋಜಿಸುವಾಗ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕೆಂಬ ವಿಚಾರವನ್ನು ಎಲ್ಲಾ ಪಾಲುದಾರರು ಒಪ್ಪಿದ್ದಾರೆ. ಪರಿಸ್ಥಿತಿಗಳನ್ನು ಗಮನದಲ್ಲಿರಿಸಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದ ಬಳಿಕ ಟೂರ್ನಿ ಆಯೋಜನೆ ಕಡೆಗೆ ಆಲೋಚಿಸುವುದಾಗಿ ಬಿಸಿಸಿಐ ಹೇಳಿದೆ.
ಆರೋಗ್ಯ ಮತ್ತು ರಾಷ್ಟ್ರದ ಸುರಕ್ಷತೆ ಮುಖ್ಯವಾಗಿದ್ದು, ಇದಕ್ಕೆ ಕ್ರೀಡಾ ಸಂಸ್ಥೆಯು ಬದ್ಧವಾಗಿದೆ. ಬಿಸಿಸಿಐ, ಫ್ರಾಂಚೈಸಿ ಮಾಲೀಕರು, ಪ್ರಸಾರಕರು ಹಾಗೂ ಪ್ರಾಯೋಜಕರು ಒಮ್ಮತದಿಂದ ಎಲ್ಲ ರೀತಿಯಲ್ಲಿ ಸುರಕ್ಷಿತ ವಾತಾವರಣ ಸೃಷ್ಠಿಯಾದ ಬಳಿಕವಷ್ಟೇ 2020ರ ಐಪಿಎಲ್ ಟೂರ್ನಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಬಿಸಿಸಿಐ ತನ್ನ ಎಲ್ಲಾ ಪಾಲುದಾರರೊಂದಿಗೆ ಟೂರ್ನಿಯ ಸಂಭಾವ್ಯ ಪ್ರಾರಂಭದ ದಿನಾಂಕದ ಬಗ್ಗೆ ಪರಿಸ್ಥಿತಿಯನ್ನು ಪರಿಶೀಲಿಸಿ ತೀರ್ಮಾನಿಸುತ್ತದೆ ಮತ್ತು ಭಾರತ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಇತರೆ ರಾಜ್ಯ ನಿಯಂತ್ರಣ ಸಂಸ್ಥೆಗಳಿಂದ ಮಾರ್ಗದರ್ಶನ ಪಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.