ಮುಂಬೈ: ಕೊರೊನಾ ಹಾವಳಿ ಜೋರಾಗಿರುವ ಕಾರಣ ಎಲ್ಲ ಕ್ರೀಡೆಗಳಂತೆ ಕ್ರಿಕೆಟ್ ಟೂರ್ನಿ ಕೂಡ ಸ್ತಬ್ಧಗೊಂಡಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ಮಂಡಳಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಇದರ ಮಧ್ಯೆ ತಂಡದ ಮಾಜಿ ಆಟಗಾರ, ಪ್ರಧಾನ ವ್ಯವಸ್ಥಾಪಕರಾಗಿರುವ ಸಾಬಾ ಕರೀಂ ಅನೇಕ ವಿಷಯಗಳನ್ನ ಬಿಸಿಸಿಐ ಜತೆ ಚರ್ಚೆ ನಡೆಸಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಇದೇ ವಿಷಯವಾಗಿ ಖಾಸಗಿ ಸುದ್ದಿವಾಹಿನಿ ಜತೆ ಮಾತನಾಡಿರುವ ಬಿಸಿಸಿಐ ಹಿರಿಯ ಕಾರ್ಯನಿರ್ವಾಹಕರೊಬ್ಬರು, ಅನೇಕ ವಿಷಯಗಳ ಕುರಿತು ಕರೀಂ ನಮ್ಮೊಂದಿಗೆ ಚರ್ಚೆ ನಡೆಸಿಲ್ಲ. ಹೀಗಾಗಿ ಆರ್ಥಿಕ ಪರಿಸ್ಥಿತಿ ಮೇಲೆ ಅದು ವ್ಯತಿರಿಕ್ತ ಪರಿಣಾಮ ಬೀರಿದ್ದು, ಶೀಘ್ರದಲ್ಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.
ಬಿಸಿಸಿಐ ಜತೆ ಎಲ್ಲ ವಿಚಾರಗಳ ಕುರಿತು ಹಂಚಿಕೊಳ್ಳಬೇಕು. ಪ್ರಧಾನ ವ್ಯವಸ್ಥಾಪಕರಾಗಿರುವ ಬಾಬಾ ಕರೀಂ ವ್ಯಾಪ್ತಿಗೆ ಬರುವ ಅನೇಕ ವಿಚಾರಗಳು ಹಾಗೇ ಉಳಿದುಕೊಂಡಿವೆ. ಈಗಾಗಲೇ ಬಿಸಿಸಿಐ ಪದಾಧಿಕಾರಿಗಳು, ಕಾರ್ಯನಿರ್ವಾಹಕರು ಆರ್ಥಿಕ ಸಂಕಷ್ಟದಿಂದ ಹೊರಬರಲು ಅನೇಕ ರೀತಿಯ ಚರ್ಚೆ ನಡೆಸುತ್ತಿದ್ದು, ಕರೀಂ ಮಾತ್ರ ಯಾವುದೇ ರೀತಿಯ ಕೊಡುಗೆ ನೀಡಿಲ್ಲ. ಕೇವಲ ಇದು ಒಂದೇ ಸಮಸ್ಯೆಯಲ್ಲ. ದೇಶಿ ಟೂರ್ನಿಗಳ ಯೋಜನೆ ಬಗ್ಗೆ ಕೂಡ ಯಾವುದೇ ಸಿದ್ಧತೆ ನಡೆಸಿಲ್ಲ. ದೇಶಿ ಟೂರ್ನಿಗಳಿಗೆ ಸಂಬಂಧಿಸಿದ ಯಾವುದೇ ಬಗೆಯ 'ಬ್ಯಾಕ್ ಅಪ್' ಯೋಜನೆಗಳು ಇಲ್ಲ ಎಂದಿದ್ದಾರೆ. ಇದರ ಜತೆಗೆ ಮಹಿಳಾ ತಂಡ, ಸಹಾಯಕ ಸಿಬ್ಬಂದಿ ಮತ್ತು ಮಹಿಳಾ ಆಯ್ಕೆ ಸಮಿತಿ ಇವರ ನಡವಳಿಕೆ ಮತ್ತು ಹಸ್ತಕ್ಷೇಪದ ಬಗ್ಗೆ ಈಗಾಗಲೇ ದೂರು ನೀಡಿದ್ದಾರೆ.
ಎನ್ಸಿಎ ಸಿಬ್ಬಂದಿ ನೇಮಕ ವಿಚಾರದಲ್ಲೂ ಇವರ ಹಸ್ತಕ್ಷೇಪ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿರುವ ಕಾರಣ ಇವರನ್ನ ವಿಚಾರಣೆಗೊಳಪಡಿಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.