ಡಾಕಾ: ಇಲ್ಲಿನ ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಬಾಂಗ್ಲಾದೇಶ ಇನ್ನಿಂಗ್ಸ್ ಹಾಗೂ 106 ರನ್ಗಳಿಂದ ಮಣಿಸಿ ಸರಣಿ ವಶಪಡಿಸಿಕೊಂಡಿದೆ.
ಮೂರನೇ ದಿನ 9 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಜಿಂಬಾಂಬ್ವೆ ತಂಡ ನಾಲ್ಕನೇ ದಿನ 17 ಓವರ್ಗಳಾಗುವಷ್ಟರಲ್ಲಿ ಕೆವಿನ್ ಕಸುಜಾ(10), ಬ್ರೆಂಡನ್ ಟೇಲರ್(17) ವಿಕೆಟ್ ಕಳೆದುಕೊಂಡು 44 ರನ್ ಗಳಿಸಿತ್ತು.
ಆದರೆ, ನಾಯಕ ಕ್ರೈಗ್ ಇರ್ವಿನ್ (43), ಸಿಕಂದರ್ ರಾಜಾ (37) 5ನೇ ವಿಕೆಟ್ಗೆ 60 ರನ್ ಸೇರಿಸಿದರು. ಮಾಮುನುಲ್ ಹಕ್, ಇರ್ವಿನ್ರನ್ನು ರನ್ಔಟ್ ಮಾಡಿ ಬಾಂಗ್ಲಾಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಲಂಚ್ ಬ್ರೇಕ್ ನಂತರ ಸಿಕಂದರ್ ರಾಜಾ(37) ವಿಕೆಟ್ ಕಳೆದುಕೊಳ್ಳುವ ಮೂಲಕ ಜಿಂಬಾಬ್ವೆ 189 ರನ್ಗಳಿಗೆ ಆಲೌಟ್ ಆಗಿ ಇನ್ನಿಂಗ್ಸ್ ಸೋಲು ಕಂಡಿತು. ಕೆಲವು ಅದ್ಭುತ ಬೌಂಡರಿಗಳ ಮೂಲಕ ತಿಮಿಸೆನ್ ಮರುಮ 41 ರನ್ ಗಳಿಸಿ ಮಿಂಚಿದರು.
ಅದ್ಭುತ ಬೌಲಿಂಗ್ ದಾಳಿ ನಡೆಸಿದ ಬಾಂಗ್ಲಾದ ಸ್ಪಿನ್ ಬೌಲರ್ಗಳಾದ ನಯೀಮ್ ಹಸನ್ 5 ವಿಕೆಟ್, ತೈಜುಲ್ ಇಸ್ಲಾಮ್ 4 ವಿಕೆಟ್ ಪಡೆದು ಬಾಂಗ್ಲಾದ ಭಾರಿ ಅಂತರದ ಜಯಕ್ಕೆ ಕಾರಣರಾದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಜಿಂಬಾಬ್ವೆ ಮೊದಲ ಇನ್ನಿಂಗ್ಸ್ನಲ್ಲಿ 265 ರನ್ಗಳಿಗೆ ಆಲೌಟ್ ಆಗಿತ್ತು. ನಾಯಕ ಇರ್ವಿನ್ (107) ರನ್ ಗಳಿಸಿದ್ದರು.
ಇದಕ್ಕುತ್ತರವಾಗಿ ಬಾಂಗ್ಲಾದೇಶ ತಂಡ ಮೊದಲ ಇನ್ನಿಂಗ್ಸ್ನಲ್ಲಿ ನಾಯಕ ಮೊಮಿನುಲ್ ಹಕ್(132) ಶತಕ ಹಾಗೂ ವಿಕೆಟ್ ಕೀಪರ್ ಮುಶ್ಫೀಕರ್ ರಹೀಮ್(203) ದ್ವಿಶತಕದ ನೆರವಿನಿಂದ 6 ವಿಕೆಟ್ ಕಳೆದುಕೊಂಡು 560 ರನ್ ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತ್ತು.
ಆಕರ್ಷಕ ದ್ವಿಶತಕ ಸಿಡಿಸಿದ ವಿಕೆಟ್ ಕೀಪರ್ ಮುಶ್ಫೀಕರ್ ರಹೀಮ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.