ಲಾಹೋರ್(ಪಾಕಿಸ್ತಾನ): ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್ ಸರಣಿಗಾಗಿ ಪಾಕ್ ತಂಡ ಪ್ರಕಟಗೊಂಡಿದ್ದು, ಇದರಲ್ಲಿ ಆರಂಭಿಕ ಆಟಗಾರ ಶಾರ್ಜಿಲ್ ಖಾನ್ಗೆ ಅವಕಾಶ ನೀಡಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಾಕ್ ಕ್ಯಾಪ್ಟನ್ ಬಾಬರ್ ಆಜಂ ಸಮರ್ಥನೆ ನೀಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ವಿರುದ್ಧದ ಪ್ರವಾಸಕ್ಕಾಗಿ 35 ಸದಸ್ಯರ ತಂಡ ಘೋಷಣೆ ಮಾಡಿದ್ದು, ಟಿ-20 ತಂಡದಲ್ಲಿ ಶಾರ್ಜಿಲ್ ಅವಕಾಶ ಪಡೆದುಕೊಂಡಿದ್ದಾರೆ. ಆರಂಭಿಕ ಆಟಗಾರನಾಗಿರುವ ಶಾರ್ಜಿಲ್ ಫಿಟ್ನೆಟ್ ಬಗ್ಗೆ ಅನೇಕ ಟೀಕೆಗಳು ಕೇಳಿ ಬಂದಿರುವ ನಡುವೆ ಕೂಡ ಇವರ ಆಯ್ಕೆಯಾಗಿದ್ದು, ಇದಕ್ಕೆ ಕ್ಯಾಪ್ಟನ್ ಕೂಡ ಸಮರ್ಥನೆ ನೀಡಿದ್ದಾರೆ.
ಶಾರ್ಜಿಲ್ ಫಿಟ್ ಆಗಿಲ್ಲ ಎಂಬ ಮಾತು ಒಪ್ಪಿಕೊಂಡಿರುವ ಬಾಬರ್, ಮುಂಬರುವ ಸರಣಿಯಲ್ಲಿ ಆರಂಭಿಕ ಬ್ಯಾಟ್ಸ್ಮನ್ಗಳ ದೃಷ್ಟಿಯಿಂದ ಅವರ ಆಯ್ಕೆ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದಿದ್ದಾರೆ. ಅವರು ಏಕಾಏಕಿಯಾಗಿ ಶಾದಾಬ್(ಖಾನ್) ಆಗಲು ಸಾಧ್ಯವಿಲ್ಲ. ಆದರೆ ಮೇಲಿಂದ ಮೇಲೆ ಅವಕಾಶ ನೀಡಿದಾಗ ತಮ್ಮ ಸಾಮರ್ಥ್ಯ ಹೊರಹಾಕಲು ಸಾಧ್ಯವಾಗುತ್ತದೆ. ಜತೆಗೆ ಓರ್ವ ಅತ್ಯುತ್ತಮ ಆರಂಭಿಕ ಆಟಗಾರನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಶಾರ್ಜಿಲ್ ಖಾನ್ ಜತೆ ಕರಾಚಿ ಕಿಂಗ್ಸ್ನಲ್ಲಿ ಕ್ರಿಕೆಟ್ ಆಡಿದ್ದೇನೆ. ಅವರು ಒತ್ತಡ ನಿರ್ವಹಿಸುವ ಕಲೆ ಕರಗತ ಮಾಡಿಕೊಂಡಿದ್ದು, ತಂಡದ ಆಟವನ್ನೇ ಸಂಪೂರ್ಣವಾಗಿ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಇದೀಗ ಫಿಟ್ನೆಸ್ ಬಗ್ಗೆ ಅವರು ಗಮನ ಹರಿಸಿದ್ದಾರೆ ಎಂದರು.
2017ರಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಶಾರ್ಜಿಲ್ ಖಾನ್ ಪಾತ್ರ ಕೇಳಿ ಬಂದಿದ್ದ ಕಾರಣ ಎರಡು ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು. ನಿಷೇಧ ಮುಕ್ತಾಯಗೊಂಡ ಬಳಿಕ ದೇಶಿ ಕ್ರಿಕೆಟ್ನಲ್ಲಿ ಓಪನರ್ ಆಗಿ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಿದ್ದಾರೆ. ಪಾಕಿಸ್ತಾನ ತಂಡ ಆಫ್ರಿಕಾ ವಿರುದ್ಧ ಮೂರು ಏಕದಿನ ಹಾಗೂ ನಾಲ್ಕು ಟಿ-20 ಪಂದ್ಯ, ಜಿಂಬಾಬ್ವೆ ವಿರುದ್ಧ ಮೂರು ಟಿ-20 ಪಂದ್ಯ ಹಾಗೂ ಎರಡು ಟೆಸ್ಟ್ಗಳಲ್ಲಿ ಭಾಗಿಯಾಗಲಿದೆ. ಹರಣಿಗಳ ವಿರುದ್ಧದ ಸರಣಿಗಾಗಿ ಮಾರ್ಚ್ 26ರಂದು ಜೋಹಾನ್ಸ್ಬರ್ಗ್ಗೆ ಪ್ರಯಾಣ ಬೆಳೆಸಲಿದೆ. ತದನಂತರ ಏಪ್ರಿಲ್ 17ರಂದು ಜಿಂಬಾಬ್ವೆ ವಿರುದ್ಧದ ಸರಣಿಗಾಗಿ ಬುಲವಾಯೊಗೆ ತೆರಳಲಿದೆ.