ದುಬೈ: ಮೆಲ್ಬೋರ್ನ್ನಲ್ಲಿ ಮಂಗಳವಾರ ಕೊನೆಗೊಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನಿಧಾನಗತಿ ಓವರ್ ದರ ಕಾಯ್ದುಕೊಂಡಿದ್ದಕ್ಕೆ ಟೆಸ್ಟ್ ಚಾಂಪಿಯನ್ಶಿಪ್ನ 4 ಅಂಕಗಳು ಮತ್ತು ಪಂದ್ಯದ ಶುಲ್ಕದ ಶೇಕಡಾ 40ರಷ್ಟು ದಂಡ ವಿಧಿಸಲಾಗಿದೆ.
ಐಸಿಸಿ ನಿಯಮಗಳ ಪ್ರಕಾರ ಟಿಮ್ ಪೇನ್ ತಂಡ ನಿಗದಿತ ಸಮಯದಲ್ಲಿ 2 ಓವರ್ಗಳನ್ನು ತಡವಾಗಿ ಮಾಡಿದ್ದಕ್ಕೆ ಐಸಿಸಿ ಎಲೈಟ್ ಪ್ಯಾನಲ್ ಮ್ಯಾಚ್ ರೆಫ್ರಿ ಡೇವಿಡ್ ಬೂನ್ ಈ ದಂಡವನ್ನು ವಿಧಿಸಿದ್ದಾರೆ ಎಂದು ಐಸಿಸಿ ಹೇಳಿಕೆ ಬಿಡುಗಡೆ ಮಾಡಿದೆ.
ಇದನ್ನು ಓದಿ:ಆತ ಸೇರಿಕೊಂಡರೆ ತಂಡದ ಬಲ ಹೆಚ್ಚಲಿದೆ: ಪೇನ್ ಹೇಳಿದ್ದು ಯಾರ ಬಗ್ಗೆ ಗೊತ್ತೇ?
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ಪ್ರಕಾರ ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಎಲ್ಲ ಆಟಗಾರರು ಮತ್ತು ಸಿಬ್ಬಂದಿಗೆ ಶೇ. 20ರಷ್ಟು(ಒಂದು ಓವರ್ಗೆ) ದಂಡ ಮತ್ತು ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ನಿಯಮ 16.11.2 ಅನ್ವಯ ಓವರ್ಗೆ 2 ಅಂಕ ಕಡಿತಗೊಳಿಸಲಾಗಿದೆ. ಈ ಪಂದ್ಯದಲ್ಲಿ 2 ಓವರ್ ತಡವಾಗಿ ಮಾಡಿದ್ದಕ್ಕೆ 4 ಅಂಕವನ್ನು ತನ್ನ ಅಂಕ ಪಟ್ಟಿಯಿಂದ ಆಸೀಸ್ ಕಳೆದುಕೊಂಡಿದೆ.
ಪೇನ್ ಕೂಡ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರಿಂದ ಯಾವುದೇ ವಿಚಾರಣೆ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ.