ಅಡಿಲೇಡ್: ತೀಕ್ಷ್ಣವಾದ ಬ್ಯಾಟಿಂಗ್ ಕೊರತೆಯಿಂದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಾಣುವಂತಾಯಿತು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಮಂಕಾದ ಭಾರತ, ಆಸೀಸ್ ವಿರುದ್ಧ 8 ವಿಕೆಟ್ಗಳಿಂದ ಸೋಲು ಕಂಡಿದೆ. ಬ್ಯಾಟಿಂಗ್ ವೈಫಲ್ಯದಿಂದಾಗಿ 5 ದಿನದ ಟೆಸ್ಟ್ ಪಂದ್ಯ ಮೂರು ದಿನಕ್ಕೆ ಮುಕ್ತಾಯವಾಗಿದೆ. ಮೊದಲ ಟೆಸ್ಟ್ ಪಂದ್ಯದ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಕಾರಣ ಎಂದು ಅವರು ಹೇಳಿದ್ದಾರೆ.
ಪಂದ್ಯದ ಬಳಿಕ ಮಾತನಾಡಿರುವ ವಿರಾಟ್, "ಸೋಲಿನ ಭಾವನೆಯನ್ನು ಪದಗಳಲ್ಲಿ ಹೇಳುವುದು ತುಂಬಾ ಕಷ್ಟ. ನಾವು 60 ರನ್ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ್ರೂ, ಕೇವಲ 36 ರನ್ ಗಳಿಗೆ ಪತನ ಕಂಡಿದ್ದು ಬೇಸರದ ಸಂಗತಿಯಾಗಿದೆ. ನಮ್ಮ ಬ್ಯಾಟಿಂಗ್ನಲ್ಲಿ ತೀಕ್ಷ್ಣತೆ ಇಲ್ಲದಿರುವುದೇ ಮುಖ್ಯ ಕಾರಣ. ಇಂದಿನ ಫಲಿತಾಂಶ ಎಲ್ಲರಿಗೂ ನಿರಾಸೆ ತರಿಸಿದೆ. ವಿವಿಧ ಹಂತಗಳಲ್ಲಿ ಏನು ಮಾಡಬೇಕೆಂಬುದನ್ನು ಅರ್ಥಮಾಡಿಕೊಳ್ಳಲು ನಾವು ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಆದರೆ ಮೈದಾನದಲ್ಲಿ ಉತ್ತಮ ಪ್ರದರ್ಶನ ತೋರಲು ಆಗಲಿಲ್ಲ" ಎಂದಿದ್ದಾರೆ.
"ಮೊದಲ ಇನ್ನಿಂಗ್ಸ್ನಂತೆಯೇ ಬೌಲಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯಾ ವೇಗಿಗಳ ವಿರುದ್ಧ ಹೆಚ್ಚು ರನ್ ಗಳಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ ಆಸೀಸ್ ಬೌಲರ್ಗಳು ಉತ್ತಮವಾಗಿ ಸ್ಪೆಲ್ ಮಾಡಿದ್ರು. ಅವರ ಉತ್ತಮ ಬೌಲಿಂಗ್ ದಾಳಿ ಮತ್ತು ನಮ್ಮ ಬ್ಯಾಟಿಂಗ್ನಲ್ಲಿ ತೀಕ್ಷ್ಣತೆಯ ಕೊರತೆ, ಈ ಎರಡರ ಸಂಯೋಜನೆಯೊಂದಿಗೆ ನಮಗೆ ಸೋಲು ಎದುರಾಯ್ತು. ಈ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಂಡು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಓದಿ: 2020ರಲ್ಲಿ ವಿರಾಟ್ ವೈಫಲ್ಯ: 392 ದಿನ ಕಳೆದರೂ ಶತಕ ಸಿಡಿಸದ ರನ್ ಮಷಿನ್
ಮೊದಲ ಇನ್ನಿಂಗ್ಸ್ನಲ್ಲಿ ಭಾರತ 244 ರನ್ಗಳಿಸಿದ್ರೆ, ಆಸ್ಟ್ರೇಲಿಯಾ ತಂಡ 191 ರನ್ ಗಳಿಗೆ ಸರ್ವಪತನ ಕಂಡಿತ್ತು. ದ್ವಿತೀಯ ಇನ್ನಿಂಗ್ಸ್ನಲ್ಲಿ ಆಸೀಸ್ ಬೌಲರ್ಗಳ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಕೇವಲ 36 ರನ್ ಗಳಿಸಿತು. 90 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಕಾಂಗರೂ ಪಡೆ 2 ವಿಕೆಟ್ ಕಳೆದುಕೊಂಡು 93 ರನ್ ಗಳಿಸುವ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.