ಚೆಸ್ಟರ್ ಲೇ ಸ್ಟ್ರೀಟ್: ಹಾವು-ಏಣಿಯಾಟದಂತಿದ್ದ ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳ ಪಂದ್ಯದಲ್ಲಿ ಕೊನೆಗೆ ವಿಜಯಲಕ್ಷ್ಮಿ ಲಂಕಾ ಪಾಲಾದಳು. ಆದರೆ ಈ ಜಯಕ್ಕೆ ಕಾರಣರಾಗಿದ್ದು ಹಿರಿಯ ಆಲ್ರೌಂಡರ್ ಏಂಜೆಲೋ ಮ್ಯಾಥ್ಯೂಸ್.
ಹೌದು, ಲಂಕಾ ತಂಡದ ಮಾಜಿ ನಾಯಕನೂ ಆಗಿರುವ ಮ್ಯಾಥ್ಯೂಸ್ ನಿನ್ನೆ ನಡೆದ ಪಂದ್ಯದಲ್ಲಿ ಶತಕ ಸಿಡಿಸಿ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದ ವಿಂಡೀಸ್ ಯುವ ಬ್ಯಾಟ್ಸ್ಮನ್ ನಿಕೋಲಸ್ ಪೂರನ್ರನ್ನು ಔಟ್ ಮಾಡುವ ಮೂಲಕ ಲಂಕಾ ತಂಡಕ್ಕೆ 23 ರನ್ಗಳ ಗೆಲುವು ತಂದುಕೊಟ್ಟರು.
ಈ ಪಂದ್ಯಕ್ಕೂ ಮುನ್ನ ಮ್ಯಾಥ್ಯೂಸ್ 2017 ರಲ್ಲಿ ಕೊನೆಯ ಬಾರಿಗೆ ಬೌಲಿಂಗ್ ಮಾಡಿದ್ದರು. ಕಳೆದ ಎರಡು ವರ್ಷಗಳಿಂದ ಕೇವಲ ಬ್ಯಾಟಿಂಗ್ ಮಾತ್ರ ಮಾಡುತ್ತಿದ್ದ ಅವರು ತಂಡದ ಪರಿಸ್ಥಿತಿ ಅರಿತು, ಬೌಲಿಂಗ್ ಮಾಡುವ ಮೂಲಕ ವಿಂಡೀಸ್ ತಂಡದ ಪಾಲಾಗುತ್ತಿದ್ದ ಜಯವನ್ನು ಲಂಕಾಪರ ತಿರುಗಿಸಿದರು.
ಲಂಕಾ ನಾಯಕ ಕರುಣರತ್ನೆ ಬೌಲಿಂಗ್ ವಿಭಾಗವನ್ನು ನಿಭಾಯಿಸುವಲ್ಲಿ ಎಡವಿದ್ದರು. ಕೊನೆಯಲ್ಲಿ 6 ಓವರ್ಗಳಿದ್ದಾಗ, ಟಾಪ್ ವೇಗಿಗಳಾದ ಮಲಿಂಗಾ ಹಾಗೂ ಉದಾನಗೆ 2 ಓವರ್ಗಳು ಬಾಕಿಯಿದ್ದವು. ಸ್ಪಿನ್ನರ್ ವಂಡರ್ಸೆಗೆ ಮೂರು ಓವರ್ಗಳು ಬಾಕಿಯಿದ್ದರು, ಆದರೆ ಸ್ಪಿನ್ನರ್ ಕೈಯ್ಯಲ್ಲಿ ಬಾಲ್ ನೀಡಲು ಪೂರನ್ರ ಭಯವಿತ್ತು. ಹೀಗಾಗಿ ಹಿರಿಯ ಆಲ್ರೌಂಡರ್ ಮ್ಯಾಥ್ಯೂಸ್ ಕೈಗೆ ನಾಯಕ ಕರುಣರತ್ನೆ ಬಾಲ್ ನೀಡಿದರು. ಎರಡು ವರ್ಷಗಳ ನಂತರ ಬೌಲಿಂಗ್ ಮಾಡಿದರೂ, ಶತಕದಾರಿ ಪೂರನ್ ವಿಕೆಟ್ ಪಡೆದ ಮ್ಯಾಥ್ಯೂಸ್ ಲಂಕಾ ಗೆಲುವನ್ನು ಕನ್ಫರ್ಮ್ ಮಾಡಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಲಂಕಾ 338 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. 339 ರನ್ಗಳ ಬೆನ್ನತ್ತಿದ ವಿಂಡೀಸ್ 315 ರನ್ಗಳಿಲಷ್ಟೇ ಶಕ್ತವಾಗಿ 23 ರನ್ಗಳಿಂದ ಸೋಲೊಪ್ಪಿಕೊಂಡಿತು.