ನವದೆಹಲಿ: 20 ವರ್ಷಗಳ ಹಿಂದೆ ಭಾರತ ಕ್ರಿಕೆಟ್ನಲ್ಲಿ ನಡೆದಿದ್ದ ಬೃಹತ್ ಫಿಕ್ಸಿಂಗ್ನ ರೂವಾರಿಯಾಗಿದ್ದ ಸಂಜೀವ್ ಚಾವ್ಲಾನನ್ನು ಭಾರತಕ್ಕೆ ಕರೆತರಲಾಗಿದ್ದು, ಜನರೆದುರು ನಡೆಯುವ ಪ್ರತಿಯೊಂದು ಪಂದ್ಯ ಫಿಕ್ಸಿಂಗ್ಗೆ ಒಳಪಟ್ಟಿರುತ್ತದೆ ಎಂಬ ಆಘಾತಕಾರಿ ಹೇಳಿಕೆ ನೀಡಿದ್ದಾನೆ.
2000ನೇ ಇಸವಿಯಲ್ಲಿ ನಡೆದಿದ್ದ ಭಾರತ ಮತ್ತ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ಮ್ಯಾಚ್ ಫಿಕ್ಸಿಂಗ್ನ ಪ್ರಮುಖ ಆರೋಪಿಯಾಗಿರುವ ಸಂಜೀವ್ ಚಾವ್ಲಾ, ನಮ್ಮೆದುರು ನಡೆಯುವ ಎಲ್ಲಾ ಪಂದ್ಯಗಳು ಫಿಕ್ಸಿಂಗ್ಗೆ ಒಳಗಾಗಿರುತ್ತವೆ ಎಂದು ಹೇಳಿದ್ದಾನೆ. ಇದೊಂದು ಅಂಡರ್ ವರ್ಲ್ಡ್ ಮಾಫಿಯಾ. ಅದರ ನಿಯಂತ್ರಣದಲ್ಲಿ ಕ್ರಿಕೆಟ್ ನಡೆಯುತ್ತದೆ. ಒಬ್ಬ ಸಿನಿಮಾ ನಿರ್ದೇಶಕ ಸಿನಿಮಾ ಹೇಗೆ ನಿರ್ದೇಶಿಸುತ್ತಾನೋ ಹಾಗೆ ಫಿಕ್ಸಿಂಗ್ ಕೂಡ ನಡೆಯುತ್ತದೆ ಎಂದು ಚಾವ್ಲಾ ಹೇಳಿದ್ದಾನೆ.
2000ರಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತದ ಪ್ರವಾಸ ಕೈಗೊಂಡಿತ್ತು. ಆ ವೇಳೆ ಹರಿಣಗಳ ನಾಯಕ ಹ್ಯಾನ್ಸಿ ಕ್ರೊಂಜೆ ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಸಂಜೀವ್ ಚಾವ್ಲಾ ಅವರು ಪ್ರಮುಖ ಆರೋಪಿಯಾಗಿದ್ದ. ಹ್ಯಾನ್ಸಿ ಕ್ರೊಂಜೆ ಹಾಗೂ ಸಂಜೀವ್ ಚಾವ್ಲಾ ಮಾತನಾಡಿರುವ ಆಡಿಯೋ ಕ್ಲಿಪ್ಗಳು ಭಾರತದಲ್ಲಿ ನಡೆದ ಬೃಹತ್ ಮ್ಯಾಚ್ ಫಿಕ್ಸಿಂಗ್ ಹಗರಣವನ್ನು ಬಿಚ್ಚಿಟ್ಟಿತ್ತು.
ಇನ್ನು ಈ ಮಾಫಿಯಾದಲ್ಲಿ ಅಂಡರ್ ವರ್ಲ್ಡ್ನ ಭಯಾನಕ ವ್ಯಕ್ತಿಗಳು ಸೇರಿದ್ದಾರೆ. ಅವರ ಬಗ್ಗೆ ಮಾಹಿತಿ ನೀಡಿದರೆ ನನ್ನನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಚಾವ್ಲಾ ಪೊಲೀಸ್ ಬಳಿ ಹೇಳಿದ್ದಾನೆ.