ಪುಣೆ : ತವರಿನಲ್ಲಿ ಟೆಸ್ಟ್ ಮತ್ತು ಟಿ20 ಸರಣಿಗಳನ್ನು ಗೆದ್ದಿರುವ ಭಾರತ ತಂಡ ಇದೀಗ ಏಕದಿನ ಸರಣಿ ಗೆದ್ದು ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ತಾನೇ ಪ್ರಬಲ ಎಂದು ತೋರಿಸುವ ಇರಾದೆಯಲ್ಲಿದೆ. ಇತ್ತ ಏಕದಿನ ಚಾಂಪಿಯನ್ ಆಗಿರುವ ಇಂಗ್ಲೆಂಡ್ ಈ ಸರಣಿಯನ್ನಾದರು ಗೆದ್ದು ತನ್ನ ನಂಬರ್ 1 ಪಟ್ಟ ಉಳಿಸಿಕೊಳ್ಳುವ ಇರಾದೆಯಲ್ಲಿದೆ.
ಮಾರ್ಚ್ 23ರಿಂದ ಏಕದಿನ ಸರಣಿ ಆರಂಭವಾಗಲಿದೆ. ಸದ್ಯಕ್ಕೆ ಟಿ20 ವಿಶ್ವಕಪ್ ಕಡೆಗಿನ ಗಮನ ಕಡಿಮೆ ಮಾಡಿ, ಪ್ರಸ್ತುತ ಏಕದಿನ ಸರಣಿ ಗೆಲ್ಲುವುದಕ್ಕೆ ಎರಡೂ ತಂಡ ತಮ್ಮ ಚಿತ್ತ ಹರಿಸಿವೆ. ಭಾರತ ತಂಡದಲ್ಲಿ ಬುಮ್ರಾ, ಶಮಿಯಂತಹ ಆಟಗಾರರೇ ಹೊರಗುಳಿದಿದ್ದರೆ, ಇಂಗ್ಲೆಂಡ್ ತಂಡ ಆರ್ಚರ್ ಸೇವೆ ಕಳೆದುಕೊಳ್ಳಲಿದೆ.
ಈ ಸರಣಿ ಭಾರತಕ್ಕಿಂತಲೂ ಏಕದಿನ ವಿಶ್ವಕಪ್ಗೆ ಅರ್ಹತೆಗಿಟ್ಟಿಸಿಕೊಳ್ಳುವ ಸಲುವಾಗಿ ಇಂಗ್ಲೆಂಡ್ಗೆ ಹೆಚ್ಚು ಪ್ರಮುಖವಾಗಿದೆ. ಭಾರತ ತಂಡದ ಆತಿಥ್ಯವಹಿಸಿರುವುದರಿಂದ ನೇರ ಅರ್ಹತೆ ಗಿಟ್ಟಿಸಿದೆ. ಏಕದಿನ ಸೂಪರ್ ಲೀಗ್ನ ಪಾಯಿಂಟ್ ಪಟ್ಟಿಯಲ್ಲಿ ಇಂಗ್ಲೆಂಡ್ 3ನೇ ಸ್ಥಾನದಲ್ಲಿದ್ದರೆ, ಭಾರತ ಕೇವಲ 3 ಪಂದ್ಯಗಳನ್ನಾಡಿ 10ನೇ ಸ್ಥಾನದಲ್ಲಿದೆ.
ಎರಡು ತಂಡಗಳು ಮಿಶ್ರ ದಾಖಲೆಗಳನ್ನು ಹೊಂದಿವೆ. ಇಂಗ್ಲೆಂಡ್ 2-1ರಲ್ಲಿ ಐರ್ಲೆಂಡ್ ವಿರುದ್ಧ ಗೆದ್ದರೆ, ಆಸ್ಟ್ರೇಲಿಯಾ ವಿರುದ್ಧ 1-2ರಲ್ಲಿ ಸೋಲು ಕಂಡಿದೆ. ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ತನ್ನ ಮೊದಲ ಏಕದಿನ ಸೂಪರ್ ಲೀಗ್ ಸರಣಿಯನ್ನಾಡಿ 1-2ರಲ್ಲಿ ಸೋಲು ಕಂಡು 10ನೇ ಸ್ಥಾನದಲ್ಲಿದೆ. ಅಲ್ಲದೆ ಅದಕ್ಕೂ ಹಿಂದಿನ ನ್ಯೂಜಿಲ್ಯಾಂಡ್ ವಿರುದ್ಧ 0-3ರಲ್ಲಿ ವೈಟ್ವಾಷ್ ಅನುಭವಿಸಿದೆ.
ಇನ್ನು, ಇಂಗ್ಲೆಂಡ್ ಟಿ20 ಸರಣಿಯಲ್ಲಿ ಅವಕಾಶವಂಚಿತರಾಗಿದ್ದ ಕೆಲ ಆಟಗಾರರಿಗೆ ಅವಕಾಶ ನೀಡಲು ಬಯಸಿದೆ. ಜೋರೂಟ್, ಆರ್ಚರ್ ಮತ್ತು ಕ್ರಿಸ್ ವೋಕ್ಸ್ ವಿಶ್ರಾಂತಿ ಮತ್ತು ಗಾಯದ ಕಾರಣ ತವರಿಗೆ ಮರಳಿರುವ ಈ ಸಂದರ್ಭದಲ್ಲಿ ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ರೀಸ್ ಟಾಪ್ಲೆಗೆ ಅವಕಾಶ ಕೊಡುವ ನಿರೀಕ್ಷೆಯಿದೆ.
ಭಾರತ ತಂಡವೂ ಕೂಡ ಮೊದಲ ಆಯ್ಕೆಯ ಆಟಗಾರರಾದ ಜಸ್ಪ್ರೀತ್ ಬುಮ್ರಾ, ಮೊಹ್ಮಮದ್ ಶಮಿ ಮತ್ತು ರವೀಂದ್ರ ಜಡೇಜಾ ಅವರ ಸೇವೆ ಕಳೆದುಕೊಳ್ಳಲಿದೆ. ಇವರ ಬದಲಾಗಿ ಸೂರ್ಯಕುಮಾರ್ ಯಾದವ್, ಕೃನಾಲ್ ಪಾಂಡ್ಯ ಮತ್ತು ಪ್ರಸಿದ್ ಕೃಷ್ಣ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಲಿದ್ದಾರೆ.
ಇವರ ಜೊತೆ ಆಸೀಸ್ ವಿರುದ್ದ ಮಿಂಚಿದ್ದ ಮೊಹಮ್ಮದ್ ಸಿರಾಜ್ ಮತ್ತು ಮತ್ತು ಟಿ.ನಟರಾಜನ್ ಕೂಡ ಅವಕಾಶ ಪಡೆಯುವ ಸಾಧ್ಯತೆಯಿದೆ. ಟಿ20 ಸರಣಿಯಲ್ಲಿ ಅವಕಾಶ ವಂಚಿತರಾಗಿದ್ದ ಶಿಖರ್ ಧವನ್ ಜೊತೆಗೆ ಫಾರ್ಮ್ ಕಳೆದುಕೊಂಡಿರುವ ಕೆ ಎಲ್ ರಾಹುಲ್ಗೆ ಮತ್ತೊಂದು ಅವಕಾಶ ನೀಡುವ ವಿಚಾರವಾಗಿ ಕೊಹ್ಲಿ ಈಗಾಗಲೇ ಸುಳಿವು ನೀಡಿದ್ದಾರೆ.
ಭಾರತ ಪುಣೆಯಲ್ಲಿ ಆಡಿರುವ ತನ್ನ ಕೊನೆಯ ಪಂದ್ಯದಲ್ಲಿ ಸೋಲು ಕಂಡಿದೆ. 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸೋಲು ಕಂಡಿತ್ತು. ಆದರೆ, ಇಂಗ್ಲೆಂಡ್ ವಿರುದ್ಧ ಇಲ್ಲಿ 2017ರಲ್ಲಿ ನಡೆದಿದ್ದ ಪಂದ್ಯದಲ್ಲಿ 3 ವಿಕೆಟ್ಗಳಿಂದ ಜಯ ಸಾಧಿಸಿದೆ. ಆ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 350 ರನ್ಗಳ ಗುರಿಯನ್ನು ಭಾರತ 3 ವಿಕೆಟ್ಗಳಿಂದ ಮಣಿಸಿತ್ತು. ಕೊಹ್ಲಿ ಮತ್ತು ಜಾಧವ್ ಶತಕ ಬಾರಿಸಿ ಗೆಲುವಿನ ಗಡಿದಾಟಿಸಿದ್ದರು.
ಭಾರತ vs ಇಂಗ್ಲೆಂಡ್ ತಂಡಗಳು ಒಟ್ಟು 105 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ ತಂಡ 53 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, 42 ಪಂದ್ಯಗಳಲ್ಲಿ ಇಂಗ್ಲೆಂಡ್ ಜಯ ಸಾಧಿಸಿದೆ. 2 ಪಂದ್ಯ ಟೈನಲ್ಲಿ ಅಂತ್ಯಗೊಂಡಿದ್ದರೆ, 8 ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.
ಭಾರತ ತಂಡ : ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಕೃನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಟಿ ನಟರಾಜನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ, ಶಾರ್ದುಲ್ ಠಾಕೂರ್.
ಇಂಗ್ಲೆಂಡ್ ತಂಡ : ಇಯೊನ್ ಮಾರ್ಗನ್ (ನಾಯಕ), ಮೋಯಿನ್ ಅಲಿ, ಜಾನಿ ಬೈರ್‌ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಸ್ಯಾಮ್ ಕರ್ರನ್, ಟಾಮ್ ಕುರ್ರನ್, ಲಿಯಾಮ್ ಲಿವಿಂಗ್‌ಸ್ಟೋನ್, ಮ್ಯಾಟ್ ಪಾರ್ಕಿನ್ಸನ್, ಆದಿಲ್ ರಶೀದ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟಾಪ್ಲೆ, ಮಾರ್ಕ್ ವುಡ್.
ಮೀಸಲು ಆಟಗಾರರು: ಜೇಕ್ ಬಾಲ್, ಕ್ರಿಸ್ ಜೋರ್ಡಾನ್, ಡೇವಿಡ್ ಮಲನ್.