ಜೋಹನ್ಸ್ಬರ್ಗ್ : ಇಂಗ್ಲೆಂಡ್ ವಿರುದ್ಧದ ಸರಣಿಗೆ ತಯಾರಾಗುತ್ತಿದ್ದ ದಕ್ಷಿಣ ಆಫ್ರಿಕಾ ಮಹಿಳಾ ತಂಡದ 3 ಆಟಗಾರ್ತಿಯರು ಹಾಗೂ ಸಿಬ್ಬಂದಿಗೆ ಕೋವಿಡ್ 19 ಟೆಸ್ಟ್ನಲ್ಲಿ ಪಾಸಿಟಿವ್ ವರದಿ ಬಂದಿದೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಶುಕ್ರವಾರ ಪ್ರಕಟಣೆ ಹೊರಡಿಸಿದೆ. ಜುಲೈ 27ರಂದು ಆರಂಭವಾಗಬೇಕಿದ್ದ ಮಹಿಳಾ ತರಬೇತಿ ಕ್ಯಾಂಪ್ಗೂ ಮುನ್ನ ಕೋವಿಡ್-19 ಸರಣಿ ಪರೀಕ್ಷೆಯನ್ನು ನಡೆಸುವುದಾಗಿ ಕ್ರಿಕೆಟ್ ಬೋರ್ಡ್ ತಿಳಿಸಿದೆ.
ಕೋವಿಡ್ ಟೆಸ್ಟ್ನಲ್ಲಿ ಪಾಸಿಟಿವ್ ವರದಿ ಬಂದಿರುವ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ 10 ದಿನಗಳವರೆಗೆ ಸ್ವಯಂ ಐಸೋಲೇಷನ್‌ಗೆ ಒಳಗಾಗಿದ್ದಾರೆ. ಮತ್ತು ಅವರು ತರಬೇತಿ ಶಿಬಿರದಲ್ಲಿ ಭಾಗವಹಿಸುವುದಿಲ್ಲ" ಎಂದು ಸಿಎಸ್ಎ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿರುವವರು ಭಾನುವಾರದಿಂದ ಪ್ರಿಟೋರಿಯಾದಲ್ಲಿ ಒಂದು ವಾರದ ಕೌಶಲ್ಯ ಆಧಾರಿತ ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಾರೆ ಎಂದು ಸಿಎಸ್ಎ ತಿಳಿಸಿದೆ.
ಇಂಗ್ಲೆಂಡ್ ಪ್ರವಾಸಕ್ಕೆ ಮುಂಚಿತವಾಗಿ ಅಗಸ್ಟ್ 16 ರಿಂದ ಅಗಸ್ಟ್ 27ರವರೆಗೆ ನಡೆಯುತ್ತಿರುವ 2ನೇ ತರಬೇತಿ ಶಿಬಿರಕ್ಕೂ ಮುನ್ನ ತಂಡ ಮತ್ತು ಸಹಾಯಕ ಸಿಬ್ಬಂದಿ 2ನೇ ಸುತ್ತಿನ ಪರೀಕ್ಷೆಗೊಳಗಾಗಲಿದ್ದಾರೆ.