ನವದೆಹಲಿ : ಅಹಮದಾಬಾದ್‌ನಲ್ಲಿ ಹೊಸದಾಗಿ ನಿರ್ಮಿಸಿದ ಮೊಟೆರಾ ಕ್ರೀಡಾಂಗಣದಲ್ಲಿ 2021 ಫೆಬ್ರವರಿ 24 ರಂದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಬಹು ನಿರೀಕ್ಷಿತ ಅಹರ್ನಿಶಿ ಟೆಸ್ಟ್ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.
ಇಂಗ್ಲೆಂಡ್ ತಂಡ 2021ರ ಫೆಬ್ರವರಿಯಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ. ನಾಲ್ಕು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಗಳು, ಐದು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.
ಬಿಸಿಸಿಐ ಮತ್ತು ಇಸಿಬಿ ಬಹುನಿರೀಕ್ಷಿತ ಸರಣಿಯ ಪಂದ್ಯಗಳನ್ನು ಘೋಷಿಸಿವೆ, ಮೊದಲ ಟೆಸ್ಟ್ ಫೆಬ್ರವರಿ 5ರಿಂದ ಚೆನ್ನೈನಲ್ಲಿ ನಡೆಯಲಿದೆ. 2ನೇ ಟೆಸ್ಟ್ ಪಂದ್ಯಕ್ಕೂ ಚೆನ್ನೈ ಆತಿಥ್ಯ ವಹಿಸಲಿದೆ. ಅಹಮದಾಬಾದ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಮೊಟೆರಾ ಕ್ರೀಡಾಂಗಣವು ಉಳಿದ ಎರಡು ಟೆಸ್ಟ್ ಪಂದ್ಯಗಳ ಆತಿಥ್ಯ ವಹಿಸಲಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾದ ಮೊಟೆರಾ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ ಮತ್ತು 1,10,000 ಆಸನ ಸಾಮರ್ಥ್ಯವಿದೆ.
ಕಳೆದ ವರ್ಷ ಕೋಲ್ಕತ್ತಾದಲ್ಲಿ ಆಡಿದ ಭಾರತದ ಮೊದಲ ಗುಲಾಬಿ ಚೆಂಡು ಟೆಸ್ಟ್ ಯಶಸ್ಸಿನ ನಂತರ, ಭಾರತ ಎರಡನೇ ಬಾರಿಗೆ ಅಹರ್ನಿಶಿ ಟೆಸ್ಟ್ ಪಂದ್ಯವನ್ನು ತವರಿನಲ್ಲಿ ಆಯೋಜಿಸುತ್ತಿದೆ.
ಅಹಮದಾಬಾದ್ ಟೆಸ್ಟ್ ನಂತರ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಹೊಸ ಮೈದಾನದಲ್ಲೇ ಈ ಪಂದ್ಯಗಳು ನಡೆಯಲಿವೆ. ಉಳಿದಂತೆ ಏಕದಿನ ಪಂದ್ಯಗಳು ಪುಣೆಯಲ್ಲಿ ನಡೆಯಲಿವೆ.
ಟೆಸ್ಟ್ ಸರಣಿಯ ಸಂಪೂರ್ಣ ವೇಳಾ ಪಟ್ಟಿ
- 1ನೇ ಟೆಸ್ಟ್: ಫೆಬ್ರವರಿ 5 ರಿಂದ 9 (ಚೆನ್ನೈ)
- 2ನೇ ಟೆಸ್ಟ್: ಫೆಬ್ರವರಿ 13 ರಿಂದ 17 (ಚೆನ್ನೈ)
- 3ನೇ ಟೆಸ್ಟ್: ಫೆಬ್ರವರಿ 24 ರಿಂದ 28 (ಅಹಮದಾಬಾದ್)
- 4ನೇ ಟೆಸ್ಟ್: ಮಾರ್ಚ್ 4 ರಿಂದ 8 (ಅಹಮದಾಬಾದ್)
ಟಿ20 ಸರಣಿಯ ಸಂಪೂರ್ಣ ವೇಳಾ ಪಟ್ಟಿ
- 1ನೇ ಟಿ20: ಮಾರ್ಚ್ 12 (ಅಹಮದಾಬಾದ್)
- 2ನೇ ಟಿ20: ಮಾರ್ಚ್ 14 (ಅಹಮದಾಬಾದ್)
- 3ನೇ ಟಿ20: ಮಾರ್ಚ್ 16 (ಅಹಮದಾಬಾದ್)
- 4ನೇ ಟಿ20: ಮಾರ್ಚ್ 18 (ಅಹಮದಾಬಾದ್)
- 5ನೇ ಟಿ20: ಮಾರ್ಚ್ 20 (ಅಹಮದಾಬಾದ್)
ಏಕದಿನ ಸರಣಿಯ ಸಂಪೂರ್ಣ ವೇಳಾ ಪಟ್ಟಿ
- 1ನೇ ಏಕದಿನ ಪಂದ್ಯ: ಮಾರ್ಚ್ 23 (ಪುಣೆ)
- 2ನೇ ಏಕದಿನ ಪಂದ್ಯ: ಮಾರ್ಚ್ 26 (ಪುಣೆ)
- 3ನೇ ಏಕದಿನ ಪಂದ್ಯ: ಮಾರ್ಚ್ 28 (ಪುಣೆ)