ಮೆಲ್ಬೋರ್ನ್: ಆಸ್ಟ್ರೇಲಿಯಾದ ಬಿಗ್ಬ್ಯಾಷ್ ಕ್ರಿಕೆಟ್ ಟೂರ್ನಿಯಲ್ಲಿ ಕೋವಿಡ್ ಆತಂಕ ಹುಟ್ಟಿಸಿದೆ. ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಸಿಡ್ನಿ ಥಂಡರ್ ತಂಡಗಳ 11 ಮಂದಿ ಆಟಗಾರರು ಹಾಗೂ 8 ಮಂದಿ ಸಹಾಯಕ ಸಿಬ್ಬಂದಿಗೆ ವೈರಸ್ ತಗುಲಿದೆ.
ಶುಕ್ರವಾರ ನಾಲ್ಕು ಆಟಗಾರರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ ಎಂದು ಸಿಡ್ನಿ ಥಂಡರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ, ಮೆಲ್ಬೋರ್ನ್ ಸ್ಟಾರ್ಸ್ ಟೀಂನ ಏಳು ಆಟಗಾರರು ಮತ್ತು 8 ಜನ ಸಹಾಯಕ ಸಿಬ್ಬಂದಿಗೆ ಕೊರೊನಾ ವಕ್ಕರಿಸಿದೆ. ಅಡಿಲೇಡ್‌ನಲ್ಲಿ ನಡೆಯುವ ಇಂದಿನ ಪಂದ್ಯದಲ್ಲಿ ಸಿಡ್ನಿ ಥಂಡರ್ ಹಾಗೂ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಭಾನುವಾರ ಮೆಲ್ಬೋರ್ನ್ ಸ್ಟಾರ್ಸ್‌ನ ತಂಡವು ಪರ್ತ್ ಸ್ಕಾರ್ಚರ್ಸ್ ವಿರುದ್ಧ ಆಡಬೇಕಿದೆ.
ತಮ್ಮ ತಂಡದ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಗೆ ನಿನ್ನೆ ಪಿಸಿಆರ್ ಪರೀಕ್ಷೆ ನಡೆಸಲಾಗಿತ್ತು. ಕೆಲವರಿಗೆ ಕೋವಿಡ್ ದೃಢಪಟ್ಟ ಕಾರಣ ಆಟಗಾರರು ಮತ್ತು ಸಿಬ್ಬಂದಿಗೆ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ 7 ದಿನಗಳವರೆಗೆ ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿದೆ ಎಂದು ಮೆಲ್ಬೋರ್ನ್ ಸ್ಟಾರ್ಸ್ ತಂಡವು ತಿಳಿಸಿದೆ.
ಮುನ್ನೆಚ್ಚರಿಕೆಯಾಗಿ ನಿನ್ನೆ ನೆಗೆಟಿವ್ ಬಂದಿರುವ ಎಲ್ಲಾ ಆಟಗಾರರು ಮತ್ತೆ ಪಿಸಿಆರ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಪ್ರಸ್ತುತ ಸ್ಟಾರ್ಸ್ ತಂಡದ ಮುಂದಿನ ಪಂದ್ಯ ಹಾಗೂ ಅಡಿಲೇಡ್ ಓವಲ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಸಿಡ್ನಿ ಥಂಡರ್ ನಡುವಿನ ಇಂದಿನ ಹಣಾಹಣಿ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ.
ಆಸ್ಟ್ರೇಲಿಯಾದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡುಬರುತ್ತಿದ್ದು, ಈಗಾಗಲೇ ಆ್ಯಶಸ್ ಟೆಸ್ಟ್ ಕ್ರಿಕೆಟ್ ಸರಣಿಗೂ ಆತಂಕ ಎದುರಾಗಿದೆ. ಕಾಂಗರೂ ಪಡೆಯ ಮಧ್ಯಮ ಕ್ರಮಾಂಕದ ಬ್ಯಾಟರ್ ಟ್ರಾವಿಸ್ ಹೆಡ್ಗೆ ಕೊರೊನಾ ತಗುಲಿದ್ದರಿಂದ ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಅಲ್ಲದೆ, ಐಸಿಸಿ ಮ್ಯಾಚ್ ರೆಫರಿ ಡೇವಿಡ್ ಬೂನ್ಗೆ ಕೂಡ ಪಾಸಿಟಿವ್ ಕಂಡುಬಂದಿತ್ತು
ಇದನ್ನೂ ಓದಿ: ಆ್ಯಶಸ್ ಟೆಸ್ಟ್‌ಗೆ ಮತ್ತೆ ಕೋವಿಡ್ ಭೀತಿ; ಆಸ್ಟ್ರೇಲಿಯಾ ಆಟಗಾರನಿಗೆ ವಕ್ಕರಿಸಿದ ವೈರಸ್