ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್-19 ಔಷಧ ಕೊರತೆಯ ಹೊರತಾಗಿಯೂ ಪೂರ್ವ ದೆಹಲಿ ಕ್ಷೇತ್ರದ ಬಿಜೆಪಿ ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಮ್ಮ ಕ್ಷೇತ್ರದ ಜನತೆಗೆ ತಮ್ಮ ಕಚೇರಿಯಿಂದ ಆ್ಯಂಟಿ ವೈರಸ್ ಔಷಧ ಫ್ಯಾಬಿಫ್ಲೂವನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ.
"ಪೂರ್ವ ದೆಹಲಿಯಲ್ಲಿರುವ ಜನತೆ ತಮ್ಮ ಕಚೇರಿಗೆ ಬಂದು ಆಧಾರ್ ಕಾರ್ಡ್ ಮತ್ತು ವೈದ್ಯರು ನೀಡುವ ಔಷಧ ಚೀಟಿಯನ್ನು ತೋರಿಸಿ ಬೆಳಗ್ಗೆ 10ರಿಂದ 5ರ ನಡುವೆ ಉಚಿತವಾಗಿ ಫ್ಯಾಬಿಫ್ಲೂ ಔಷಧ ಪಡೆಯಬಹುದು" ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ. ಆದರೆ, ಗಂಭೀರ್ ಈ ಟ್ವೀಟ್ ಮಾಡುತ್ತಿದ್ದಂತೆ ಕಾಂಗ್ರೆಸ್ ಮತ್ತು ಆಮ್ಆದ್ಮಿ ಪಕ್ಷದ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ.
ಇದು ಅಪರಾಧವಲ್ಲವೇ? ಬಿಜೆಪಿ ಸಂಸದರು ಔಷಧವನ್ನು ಸಂಗ್ರಹಿಸಿ ತಮ್ಮ ಇಚ್ಛೆಯಂತೆ ನೀಡುತ್ತಿದ್ದಾರೆ. ಅವರು ಇದನ್ನು ಆಸ್ಪತ್ರೆಗಳಿಗೆ ಏಕೆ ನೀಡಬಾರದು? ಎಂದು ಸಮಾಜವಾದಿ ಪಕ್ಷದ ಸೋಮನಾಥ್ ಭಾರತಿ ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಈ ರೀತಿಯ ಅಕ್ರಮವಾಗಿ ಔಷಧ ಸಂಗ್ರಹ ಮಾಡುತ್ತಿರುವುದರಿಂದ ರೆಮ್‌ಡೆಸಿವಿರ್ ಮತ್ತು ಫ್ಯಾಬಿಫ್ಲೂ ಟ್ಯಾಬ್ಲೆಟ್ಗಳು ಮಾರುಕಟ್ಟೆಯಲ್ಲಿ ಇಲ್ಲವಾಗಿವೆ. ಬಿಜೆಪಿ ನಾಯಕರು ಅಕ್ರಮವಾಗಿ ಔಷಧಗಳನ್ನು ಸಂಗ್ರಹಿಸಿದ್ದಾರೆ. ಗುಜರಾತ್ನಲ್ಲೂ ಈಗಾಗಲೇ ನಾವು ನೋಡಿದ್ದೇವೆ. ರಾಜಕೀಯ ಉದ್ದೇಶಕ್ಕಾಗಿ ಅವರು ಅಗತ್ಯ ಔಷಧಗಳನ್ನು ಶೇಖರಿಸಿಟ್ಟುಕೊಂಡಿದ್ದಾರೆ ಎಂದು ಎಎಪಿ ನಾಯಕ ರಾಜೇಶ್ ಶರ್ಮಾ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಂಭೀರ್ ಔಷಧವನ್ನು ವಿತರಿಸುತ್ತಿರುವುದು ಕಾನೂನುಬದ್ಧವೇ ಎಂದು ಕಾಂಗ್ರೆಸ್ನ ಪವನ್ ಖೇರಾ ಪ್ರಶ್ನಿಸಿದ್ದಾರೆ. 1) ನಿಮ್ಮ ಬಳಿ ಎಷ್ಟು ಫ್ಯಾಬಿಫ್ಲೂ ಇದೆ? 2) ನೀವು ಫ್ಯಾಬಿಫ್ಲು ಹೇಗೆ ಸಂಗ್ರಹಿಸಿದ್ದೀರಿ? ಇದು ಕಾನೂನುಬದ್ಧವೇ? ಇಂತಹ ಅನಧಿಕೃತ ವಿತರಣೆಯಿದ ಔಷಧ ಅಂಗಡಿಗಳಲ್ಲಿ ಫ್ಯಾಬಿಫ್ಲೂ ಕೊರತೆಯುಂಟಾಗುವುದಿಲ್ಲವೇ? ಎಂದು ಖೇಖಾ ಟ್ವೀಟ್ನಲ್ಲಿ ಪ್ರಶ್ನಿಸಿದ್ದಾರೆ.