ಬ್ರಿಡ್ಜ್‌ಟೌನ್ (ಬಾರ್ಬಡೋಸ್): ವೆಸ್ಟ್ ಇಂಡೀಸ್ ತಂಡದ ಇತರ ಸದಸ್ಯರಲ್ಲಿ ಕೊರೊನಾ ಕಂಡುಬಂದ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯವನ್ನು ಮುಂದೂಡಲಾಗಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಸದ್ಯ ಎರಡೂ ತಂಡಗಳ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯನ್ನು ಹೋಟೆಲ್‌ನಲ್ಲಿ ಐಸೋಲೇಷನ್‌ಗೆ ಕಳುಹಿಸಲಾಗಿದೆ.
ಗುರುವಾರ ತಡರಾತ್ರಿ ಕೆನ್ಸಿಂಗ್ಟನ್ ಓವಲ್‌ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಅಲೆಕ್ಸ್ ಕೇರಿ ಹಾಗೂ ವೆಸ್ಟ್ ಇಂಡೀಸ್ ನಾಯಕ ಕಿರಾನ್ ಪೊಲಾರ್ಡ್ ಬಯೋ ಬಬಲ್ ಮೂಲಕ ಟಾಸ್ ಆಯ್ಕೆಗೆ ಆಗಮಿಸಿದ್ದರು. ಈ ವೇಳೆ, ಪೊಲಾರ್ಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಈ ಬಳಿಕ ಟಾಸ್ ಬೆನ್ನಲ್ಲೆ ಬಯೋ-ಬಬಲ್ ಒಳಗಡೆ ಕೊರೊನಾ ಸೋಂಕು ತಗುಲಿರುವ ವಿಷಯ ಬಹಿರಂಗವಾಗಿದೆ.
ಈ ಹಿನ್ನೆಲೆಯಲ್ಲಿ ಎರಡೂ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯನ್ನು ಐಸೋಲೇಷನ್‌ಗೆ ಕಳುಹಿಸಲಾಗಿದೆ. ಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಯಾವುದೇ ಪ್ರಕರಣ ಕಂಡು ಬಂದಿಲ್ಲ. ಆದರೆ, ವೆಸ್ಟ್ ಇಂಡೀಸ್ ತಂಡದಲ್ಲಿ ಯಾರಿಗೆ ಸೋಂಕು ದೃಢಪಟ್ಟಿದೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಬರಬೇಕಿದೆ.