ನಾಗ್ಪುರ: ಕಳೆದ 12-18 ತಿಂಗಳುಗಳಲ್ಲಿ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯಗಳನ್ನು ಹೇಗೆ ಆಡುತ್ತಾ ಬಂದಿದೆಯೋ ಅದನ್ನು ಮುಂದುವರೆಸಲಿದೆ ಎಂದು ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಮಂಗಳವಾರ ಹೇಳಿದ್ದಾರೆ. ಮಾಜಿ ನಾಯಕ ಅಲನ್ ಬಾರ್ಡರ್ ಅವರ ಟೀಕೆಯನ್ನು ತಳ್ಳಿ ಹಾಕಿದ ಅವರು ನಾವು ಇನ್ನಷ್ಟು ಕಠಿಣವಾಗಿ ಆಡುವ ಅಗತ್ಯ ಇದೆ ಎಂದು ಹೇಳಿದ್ದಾರೆ.
ವಿದರ್ಭ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾವು ಇನ್ನಿಂಗ್ಸ್ ಮತ್ತು 132 ಸೋಲನುಭವಿಸಿ 0-1ರ ಹಿನ್ನಡೆ ಅನುಭವಿಸಿತ್ತು. ಈ ಸೋಲಿನ ನಂತರ ಮಾಜಿ ನಾಯಕ ಅಲನ್ ಬಾರ್ಡರ್ ಕಾಂಗರೂ ಪಡೆಯನ್ನು ಟೀಕೆ ಮಾಡಿದ್ದರು. ಪ್ರವಾಸಿ ಆಸಿಸ್ ಇನ್ನಷ್ಟು ಕಠಿಣವಾಗಿ ಭಾರತೀಯ ಬೌಲರ್ಗಳನ್ನು ಎದುರಿಸ ಬೇಕು ಎಂದಿದ್ದಾರೆ. ಜಡೇಜಾ ಎಸೆತಕ್ಕೆ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ 'ಥಂಬ್ಸ್ ಅಪ್' ಮಾಡಿ ಪ್ರಶಂಸಿದ್ದಕ್ಕೆ ಬಾರ್ಡರ್ ಅವರು ಇದು ಹಾಸ್ಯಾಸ್ಪದ ಎಂದು ಹೇಳಿದ್ದರು. ಇದಕ್ಕೆ ಅಲೆಕ್ಸ್ ಕ್ಯಾರಿ, ಬಾರ್ಡರ್ ಅವರನ್ನು ನಾವು ಗೌರವಿಸುತ್ತೇವೆ. ನಾವು ಮುಂದೆ ಭಾರತದ ವಿರುದ್ಧ ಇನ್ನಷ್ಟು ಪ್ರಬಲವಾಗಿ ಆಡುತ್ತೇವೆ. ಗುಂಪಾಗಿ ಭಾರತವನ್ನು ಎದುರಿಸುತ್ತೇವೆ ಎಂದು ಅಭಿಪ್ರಾಯಪಟ್ಟರು.
ಸ್ಟೀವ್ ಸ್ಮಿತ್ರ ಆ್ಯಕ್ಷನ್ ಕುರಿತು ಪ್ರತಿಕ್ರಿಯಿಸಿದ ಕ್ಯಾರಿ, "ಸ್ಟೀವ್ ಸ್ಮಿತ್ ಜಡೇಜಾ ಬೌಲಿಂಗ್ಗೆ ಥಂಬ್ಸ್ ಅಪ್ ಮಾಡಿದ್ದಾರೆ ಎಂಬುದನ್ನು ನಾನು ಒಪ್ಪುವುದಿಲ್ಲ. ಅವರು ಸಾಮಾನ್ಯವಾಗಿ ಕ್ರೀಸ್ನಲ್ಲಿ ಆ ರೀತಿಯ ಆ್ಯಕ್ಷನ್ಗಳನ್ನು ಮಾಡುತ್ತಿರುತ್ತಾರೆ. ಅವರು ಆಟದ ನಡುವೆ ಕೈಯಲ್ಲಿ ಆ ರೀತಿ ಮಾಡುವುದು ಸಾಮಾನ್ಯವಾಗಿದೆ. ಅದೇನು ಹೊಸತಲ್ಲ. ಆದರೆ, ಅದನ್ನು ಬಾರ್ಡರ್ ಅವರು ಮೊನ್ನೆ ಪಂದ್ಯದಲ್ಲಿ ಹೆಚ್ಚಾಗಿ ಗುರುತಿಸಿದ್ದಾರೆ ಎಂದು ಕಾಣುತ್ತದೆ" ಎಂದಿದ್ದಾರೆ.
ಮೊದಲ ಪಂದ್ಯದ ಸೋಲಿನ ನಂತರವೂ ಆಸಿಸ್ ತಂಡ ಸಕಾರಾತ್ಮಕವಾಗಿದೆ. ದೆಹಲಿಯಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ಭಾರತವನ್ನು ಸಮರ್ಥವಾಗಿ ಎದುರಿಸಲು ಸಿದ್ಧವಾಗಿದೆ. ಕಳೆದ 12 ರಿಂದ 18 ತಿಂಗಳಲ್ಲಿ ಆಸ್ಟ್ರೇಲಿಯಾ ತಂಡ ಟೆಸ್ಟ್ನಲ್ಲಿ ಉತ್ತಮವಾಗಿ ಆಡುತ್ತಿದೆ. ನಾವು ಟೆಸ್ಟ್ನಲ್ಲಿ ಬಲಿಷ್ಠ ತಂಡವನ್ನು ಹೊಂದಿದ್ದೇವೆ ಎಂದು ನಾನು ಭಾವಿಸುತ್ತೇನೆ ಎಂದು ಕ್ಯಾರಿ ಹೇಳಿದ್ದಾರೆ.
"ನಾವು ಎಲ್ಲ ಹಂತದಲ್ಲೂ ಉತ್ತಮ ಟೀಂ ಹೊಂದಿದ್ದೇವೆ. ದುರದೃಷ್ಟವಶಾತ್ ಮೊದಲ ಟೆಸ್ಟ್ ನಮ್ಮ ಪ್ಲಾನ್ ರೀತಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಆದರೆ ನಾವು ಭಾರತ ಪ್ರವಾಸದಲ್ಲಿ ಮುಂದಿನ ಪಂದ್ಯದಲ್ಲಿ ನಾವು ಖಂಡಿತವಾಗಿಯೂ ನಮ್ಮ ಬಲವನ್ನು ತೋರಿಸುತ್ತೇವೆ. ಭಾರತ ತನ್ನ ನೆಲದಲ್ಲಿ ಎಷ್ಟು ಕಠಿಣವಾಗಬಲ್ಲದು ಎಂಬುದು ನಮ್ಮ ಅರಿವಿನಲ್ಲಿದೆ. ತಕ್ಕ ಯೋಜನೆಯನ್ನು ನಾವು ರೂಪಿಸಿ ಸನ್ನದ್ಧರಿದ್ದೇವೆ ಎಂದು ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಹೇಳಿದ್ದಾರೆ.
ಭಾರತೀಯ ಸ್ಪಿನ್ ಜೋಡಿ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರ ಪ್ರದರ್ಶನವು ಪರಿಣಾಮಕಾರಿಯಾಗಿದೆ. ನಾವು ಫೀಲ್ಡ್ನಲ್ಲಿ ಶಾಂತವಾಗಿರಲು ಬಯಸುತ್ತೇವೆ. ಎಲ್ಲರೊಂದಿಗೆ ಸಮಾನವಾಗಿ ಪ್ರತಿಕ್ರಿಯೆ ನೀಡುತ್ತೇವೆ. ಜಡೇಜಾ ಮತ್ತು ಅಕ್ಷರ್ ಪಟೇಲ್ ಹೆಚ್ಚು ಮೋಟೀವ್ ಆಗಿ ಕಂಡು ಬರುತ್ತಾರೆ ಅವರೊಂದಿಗೂ ತಾಳ್ಮೆಯಿಂದ ತಂಡ ನಡೆದುಕೊಳ್ಳ ಬಯಸುತ್ತದೆ ಎಂದು ಕ್ಯಾರಿ ತಿಳಿಸಿದ್ದಾರೆ.
ಇದನ್ನೂ ಓದಿ: "ನಾನು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ": ಪ್ಯಾರಿಸ್ ಒಲಿಂಪಿಕ್ಗೆ ಸಿಂಧು ಸಿದ್ಧತೆ