ಕೊಲಂಬೊ: ಕೌಟುಂಬಿಕ ಕಾರಣ ನೀಡಿ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿಗೆ ಕಾರಣರಾಗಿದ್ದ 30 ವರ್ಷದ ಭಾನುಕ ರಾಜಪಕ್ಷ ನಿವೃತ್ತಿ ವಾಪಸ್ ಪಡೆದು ಯೂ ಟರ್ನ್ ತೆಗೆದುಕೊಂಡಿದ್ದಾರೆ.
"ಶ್ರೀಲಂಕಾದ ಯುವ ಮತ್ತು ಕ್ರೀಡಾ ಸಚಿವ ನಮಲ್ ರಾಜಪಕ್ಷ ಅವರು ರಾಷ್ಟ್ರೀಯ ಆಯ್ಕೆಗಾರರೊಂದಿಗೆ ಚರ್ಚೆ ನಡೆಸಿದ ನಂತರ ಭಾನುಕ ರಾಜಪಕ್ಷ ಅವರು ಜನವರಿ 3ರಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಸಲ್ಲಿಸಿದ್ದ ನಿವೃತ್ತಿಯನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ವಾಪಸ್ ಪಡೆಯಲು ಬಯಸುವುದಾಗಿ ಎಸ್ಎಲ್ಸಿಗೆ ತಿಳಿಸಿದ್ದಾರೆ" ಎಂದು ಮಂಡಳಿ ಗುರುವಾರ ಪ್ರಕಟಣೆ ಹೊರಡಿಸಿದೆ.
ತಮ್ಮ ನಿವೃತ್ತಿಯನ್ನು ಹಿಂದಕ್ಕೆ ತೆಗೆದುಕೊಳ್ಳಲು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಬರೆದ ಪತ್ರದಲ್ಲಿ, "ನಾನು ಪ್ರೀತಿಸುವ ಕ್ರೀಡೆಯನ್ನು ದೇಶದ ಪರ ಮತ್ತಷ್ಟು ವರ್ಷಗಳ ಕಾಲ ಆಡುವುದಕ್ಕೆ ಬಯಸುತ್ತೇನೆ" ಎಂದು ತಿಳಿಸಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಸಲಹಾ ಸಮಿತಿ ಕ್ರಿಕೆಟಿಗರ ಫಿಟ್ನೆಸ್ ನಿರ್ಧರಿಸಲು ಇದ್ದ ಯೋ ಯೋ ಟೆಸ್ಟ್ ಅನ್ನು ಕೈಬಿಟ್ಟು, 8 ನಿಮಿಷಗಳ ಒಳಗೆ 2 ಕಿ.ಮೀ. ಓಟ ಪೂರೈಸಬೇಕು ಎಂಬ ಹೊಸ ನಿಯಮ ಜಾರಿಗೆ ತಂದಿತ್ತು. ಒಂದು ವೇಳೆ ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಆಟಗಾರರ ವೇತನಕ್ಕೆ ಕತ್ತರಿ ಹಾಕುವುದಾಗಿಯೂ ಎಚ್ಚರಿಕೆ ನೀಡಿದ್ದರು. ಈ ನಿಯಮ ಜಾರಿಗೆ ಬರುತ್ತಿದ್ದಂತೆ ರಾಜಪಕ್ಷ ನಿವೃತ್ತಿ ಘೋಷಿಸಿದ್ದರು.
ರಾಜಪಕ್ಷ ಶ್ರೀಲಂಕಾ ಪರ 5 ಏಕದಿನ ಮತ್ತು 18 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 89 ಮತ್ತು 320 ರನ್ಗಳಿಸಿದ್ದಾರೆ.
ಇದನ್ನೂ ಓದಿ:ಯುಎಇ ಅಲ್ಲ, 2022ರ ಐಪಿಎಲ್ ಈ ದೇಶದಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ!