ಲಂಡನ್: ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಎರಡನೇ ಬಾರಿಗೆ ತಮ್ಮ ತೋರು ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಈ ವರ್ಷದ ಕೊನೆಯಲ್ಲಿ ಆರಂಭವಾಗಲಿರುವ ಆ್ಯಷಸ್ ಸರಣಿಯಿಂದ ಹೊರಬೀಳುವ ಸಾಧ್ಯತೆಯಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಮಾನಸಿಕ ಆರೋಗ್ಯ ಸಮಸ್ಯೆಯಿಂದಾಗಿ ಭಾರತ ವಿರುದ್ಧದ ತವರಿನ ಟೆಸ್ಟ್ ಸರಣಿಯ ವೇಳೆ ಅನಿರ್ದಿಷ್ಟಾವಧಿಗೆ ಕ್ರಿಕೆಟ್ನಿಂದ ವಿಶ್ರಾಂತಿ ತೆಗೆದುಕೊಂಡಿದ್ದರು. ಐಪಿಎಲ್ನ ಮೊದಲಾರ್ಧದ ವೇಳೆ ಗಾಯಕ್ಕೆ ಒಳಗಾಗಿದ್ದ ಅವರು, 4 ತಿಂಗಳ ಹಿಂದೆ ತಮ್ಮ ತೋರು ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
" ಕಳೆದ ಏಪ್ರಿಲ್ನಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಬೆರಳಿಗೆ ಸರ್ಜರಿ ಮಾಡಿದ್ದ ಲೀಡ್ಸ್ ಮೂಲದ ವೈದ್ಯ ಡಾಗ್ ಕ್ಯಾಂಪ್ಬೆಲ್ ಸೋಮವಾರ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಿ ಸ್ಟೋಕ್ಸ್ರ ವಾಸಿಯಾಗಿರುವ ಬೆರಳಿನಿಂದ ಸ್ಕ್ರೂಗಳನ್ನು ಹೊರತೆಗೆದಿದ್ದಾರೆ. ಇದೀಗ ಅವರ ಸ್ನಾಯುರಜ್ಜು ಮತ್ತು ಅಸ್ಥಿರಜ್ಜು(tendons and ligaments)ಗಳ ಸುತ್ತ ಉಂಟಾಗುತ್ತಿದ್ದ ನೋವು ನಿವಾರಣೆಯಾಗಿದೆ" ಎಂದು ತಿಳಿದು ಬಂದಿದೆ.
ಈ ಶಸ್ತ್ರಚಿಕಿತ್ಸೆಯ ನಂತರ 30 ವರ್ಷದ ಆಟಗಾರನ ಮುರಿದ ಬೆರಳು ಸರಿಯಾಗಿದೆ ಮತ್ತು ಮುಂದಿನ ದಿನಗಳಲ್ಲಿ ಅವರು ದೀರ್ಘಕಾಲದ ನೋವಿಲ್ಲದೆ ಕ್ರಿಕೆಟ್ ಆಡಬಲ್ಲರು. ಅಲ್ಲದೇ ಶೀಘ್ರದಲ್ಲೇ ಮೈದಾನಕ್ಕೆ ಇಳಿಯಬಲ್ಲರು ಎಂದು ನಿರೀಕ್ಷಿಸಲಾಗಿದೆ.
ಸ್ಟೋಕ್ಸ್ ಕೊನೆಯದಾಗಿ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ್ದರು. ಇವರು ದ್ವಿತೀಯ ದರ್ಜೆ ತಂಡವನ್ನು ಮುನ್ನಡೆಸಿ ಪಾಕ್ ವಿರುದ್ಧ 3-0ಯಲ್ಲಿ ಸರಣಿ ಗೆಲ್ಲಿಸಿದ್ದರು. ಇದೀಗ ವಿಶ್ರಾಂತಿಯಲ್ಲಿರುವ ಅವರು ಯುಎಇಯಲ್ಲಿ ಇದೇ ತಿಂಗಳಿನಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್ಗೂ ಅಲಭ್ಯರಾಗಲಿದ್ದಾರೆ.
ಇದನ್ನು ಓದಿ:ಮುಂದಿನ ವರ್ಷ ನಾನು ಆಡುತ್ತೇನೆಯೆ ಎಂಬುದು ರೀಟೈನ್ ಪಾಲಿಸಿ ಅವಲಂಬಿಸಿದೆ: ಧೋನಿ