ಹೈದರಾಬಾದ್: ಮುಂದಿನ ತಿಂಗಳಿಂದ ಮಹತ್ವದ ಐಸಿಸಿ ಟಿ-20 ವಿಶ್ವಕಪ್ ಟೂರ್ನಮೆಂಟ್ ಆರಂಭಗೊಳ್ಳಲಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾಗೆ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮೆಂಟರ್ ಆಗಿ ಆಯ್ಕೆಯಾಗಿದ್ದಾರೆ. ಈ ಕುರಿತಾಗಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಇದೇ ಮೊದಲ ಬಾರಿಗೆ ಬಿಸಿಸಿಐ ಅಧ್ಯಕ್ಷ ಗಂಗೂಲಿ ಮೌನ ಮುರಿದರು.
2013ರಿಂದೀಚೆಗೆ ಟೀಂ ಇಂಡಿಯಾ ಐಸಿಸಿ ನಡೆಸುವ ಯಾವುದೇ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿಲ್ಲ. ಹೀಗಾಗಿ ಧೋನಿ ಅವರ ಅನುಭವ ಹಾಗೂ ಕೌಶಲ್ಯ ತಂಡದ ನೆರವಿಗೆ ಬರಲಿದೆ ಎಂಬ ಕಾರಣಕ್ಕಾಗಿ ಮಹತ್ವದ ಹುದ್ದೆಗೆ ಪರಿಗಣಿಸಲಾಗಿದೆ ಗಂಗೂಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಟಿ-20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಮೆಂಟರ್ ಎಂಎಸ್‌ಡಿ ಅನುಭವ ತಂಡಕ್ಕೆ ನೆರವಾಗಲಿದೆ; ಗಂಗೂಲಿ
ಟಿ-20 ಮಾದರಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಅದ್ಭುತ ದಾಖಲೆ ಹೊಂದಿದ್ದು, ಈಗಾಗಲೇ ಟೀಂ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾಗ ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದಾರೆ. ಸಾಕಷ್ಟು ಗಂಭೀರ ಚರ್ಚೆಯ ಬಳಿಕ ಧೋನಿಗೆ ಮೆಂಟರ್ ಸ್ಥಾನ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ದಾದಾ ಹೇಳಿದರು.
ಟೀಂ ಇಂಡಿಯಾ 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲೇ ಕೊನೆಯ ಸಲ ಚಾಂಪಿಯನ್ ಟ್ರೋಫಿ ಗೆದ್ದಿತ್ತು. ಇದಾದ ಬಳಿಕ ಐಸಿಸಿಯ ಯಾವುದೇ ಪ್ರಶಸ್ತಿಗೆ ಮುತ್ತಿಕ್ಕಿಲ್ಲ ಎಂದು ಅವರು ತಿಳಿಸಿದರು. 2019ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡಿತ್ತು. ಇದೇ ಪಂದ್ಯದಲ್ಲಿ ಧೋನಿ ಕೊನೆಯದಾಗಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದರು.
ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಮೆಂಟರ್ ಆಗಿ ಕಾರ್ಯನಿರ್ವಹಿಸಲು ಒಪ್ಪಿಕೊಂಡಿರುವ ಮಹೇಂದ್ರ ಸಿಂಗ್ ಧೋನಿಗೆ ಈಗಾಗಲೇ ಬಿಸಿಸಿಐ ಅಧ್ಯಕ್ಷ ಗಂಗೂಲಿ ಧನ್ಯವಾದ ತಿಳಿಸಿದ್ದಾರೆ.