ನವದೆಹಲಿ : ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸಕ್ಕೆ ಬಿಸಿಸಿಐ ತಂಡದ ಆಯ್ಕೆ ಮಾಡಲಿದೆ. ಯುವ ಆಟಗಾರರ ಮೇಲೆ ಆಯ್ಕೆ ಮಂಡಳಿ ಕಣ್ಣಿಟ್ಟಿದ್ದು, 30 ಆಟಗಾರರ ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಈ ತಂಡದಲ್ಲಿ ಹೊಸ ಪ್ರತಿಭೆಗಳಾದ ಅಭಿಮನ್ಯು ಈಶ್ವರನ್, ಪ್ರಿಯಾಂಕ್ ಪಾಂಚಾಲ್ ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್ ಆಯ್ಕೆಯಾಗುವ ಸಾಧ್ಯತೆ ಇದೆ. ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸುವ ಮೊದಲು ಭಾರತ ತಂಡವು ಜೂನ್ 18-22ರವರೆಗೆ ಸೌತಾಂಪ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲಿದೆ.
ನಂತರ ಭಾರತ-ಇಂಗ್ಲೆಂಡ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಟ್ರೆಂಟ್ ಬ್ರಿಡ್ಜ್ನಲ್ಲಿ (ಆಗಸ್ಟ್ 4ರಿಂದ 8ರವರೆಗೆ), 2ನೇ ಟೆಸ್ಟ್ ಲಾರ್ಡ್ಸ್ನಲ್ಲಿ(ಆಗಸ್ಟ್ 12-16), 3ನೇ ಟೆಸ್ಟ್ ಹೆಡ್ಡಿಂಗ್ಲೆನಲ್ಲಿ(ಆಗಸ್ಟ್ 25-29), 4ನೇ ಟೆಸ್ಟ್ ಕಿಯಾ ಓವೆಲ್ನಲ್ಲಿ (ಸೆ.2-6) ಹಾಗೂ ಕೊನೆಯ ಟೆಸ್ಟ್ ಓಲ್ಡ್ ಟ್ರಾಫೋರ್ಡ್ನಲ್ಲಿ (ಸೆ.10-14) ನಡೆಯಲಿದೆ.
ಭಾರತ ತಂಡ ಯುಕೆಗೆ ಪ್ರಯಾಣಿಸುವ ಮೊದಲು 14 ದಿನಗಳ ಕಾಲ ಕ್ವಾರಂಟೈನ್ಗೆ ಒಳಪಡಲಿದೆ. ಹೀಗಾಗಿ ತಂಡದಲ್ಲಿ ಕನಿಷ್ಠ 30 ಸದಸ್ಯರನ್ನು ಆಯ್ಕೆ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ.
ಓಪನರ್ ಸ್ಲಾಟ್ಗೆ ಅಭಿಮನ್ಯು ಈಶ್ವರನ್, ಪ್ರಿಯಾಂಕ್ ಪಾಂಚಾಲ್ ಮತ್ತು ದೇವದುತ್ ಪಡಿಕ್ಕಲ್ ನಡುವೆ ಪ್ರಬಲ ಸ್ಪರ್ಧೆ ನಡೆಯಲಿದೆ. ಈ ಮೂವರು ಆಟಗಾರರು ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇನ್ನು, ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿ ತಂಡದಿಂದ ಹೊರಗುಳಿದಿದ್ದ ಪೃಥ್ವಿ ಶಾ, ಐಪಿಎಲ್‌ನಲ್ಲಿ ಫಾರ್ಮ್‌ಗೆ ಮರಳಿ ಬಂದಿದ್ದು, ಅವರು ಕೂಡಾ ತಂಡಕ್ಕೆ ಹಿಂತಿರುಗುವ ನಿರೀಕ್ಷೆಯಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಈಶ್ವರನ್ ಮತ್ತು ಪಾಂಚಾಲ್ ಬ್ಯಾಕಪ್ ಓಪನರ್ ಆಗಿದ್ದರು. ವಿಕೆಟ್ ಕೀಪರ್ ವಿಭಾಗದಲ್ಲೂ ಪೈಪೋಟಿ ಇದ್ದು ರಿಷಭ್ ಪಂತ್ ಮತ್ತು ವೃದ್ಧಿಮಾನ್ ಸಹಾ ನಂತರ ಇಶಾನ್ ಕಿಶನ್ ಕೂಡ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಿದೆ.
ಇನ್ನು, ಸ್ಪಿನ್ ವಿಭಾಗದಲ್ಲಿ ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ಜೊತೆ ಅಕ್ಸರ್ ಪಟೇಲ್ ಮತ್ತು ರಾಹುಲ್ ಚಹರ್ ಕೂಡಾ ರೇಸ್ನಲ್ಲಿದ್ದಾರೆ. ಆಲ್ ರೌಂಡರ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಲ್‌ರೌಂಡರ್ ಆಗಿದ್ದರೆ, ಶಾರ್ದುಲ್ ಠಾಕೂರ್ ಅವರನ್ನು ಬೌಲಿಂಗ್ ಆಲ್‌ರೌಂಡರ್ ಆಗಿ ಬಳಸಬಹುದು. ಟಿ.ನಟರಾಜನ್ ಅನುಪಸ್ಥಿತಿಯಲ್ಲಿ, ಜಯದೇವ್ ಉನಾದ್ಕತ್ ಎಡಗೈ ಸೀಮ್ ಬೌಲಿಂಗ್ ಆಯ್ಕೆ ಆಗಬಹುದು ಎನ್ನಲಾಗಿದ್ದರೂ ಸಹ ಪ್ರಸಿದ್ಧ್ ಕೃಷ್ಣ ಮತ್ತು ಅವೇಶ್ ಖಾನ್ ಕೂಡ ಇಂಗ್ಲೆಂಡ್ ವಿಮಾನ ಹತ್ತುವ ನಿರೀಕ್ಷೆಯಿದೆ. ಮೊಹಮ್ಮದ್ ಶಮಿ, ಹನುಮಾ ವಿಹಾರಿ, ಭುವನೇಶ್ವರ್ ಕುಮಾರ್ ಗಾಯಗಳಿಂದ ಚೇತರಿಸಿಕೊಂಡಿದ್ದು ತಂಡಕ್ಕೆ ಮರಳುವ ನಿರೀಕ್ಷೆಯಿದೆ.
30 ಆಟಗಾರರ ಸಂಭವನೀಯ ಪಟ್ಟಿ :
ಆರಂಭಿಕ ಆಟಗಾರರು: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ಅಭಿಮನ್ಯು ಈಶ್ವರನ್, ಪ್ರಿಯಾಂಕ್ ಪಾಂಚಾಲ್/ ದೇವದತ್ ಪಡಿಕ್ಕಲ್
ಮಧ್ಯಮ ಕ್ರಮಾಂಕ: ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ಕೆ.ಎಲ್. ರಾಹುಲ್
ಆಲ್‌ರೌಂಡರ್‌ಗಳು: ವಾಷಿಂಗ್ಟನ್ ಸುಂದರ್, ಹಾರ್ದಿಕ್ ಪಾಂಡ್ಯ
ಸ್ಪಿನ್ನರ್‌ಗಳು: ಆರ್. ಅಶ್ವಿನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ರಾಹುಲ್ ಚಹರ್
ಪೇಸರ್‌ಗಳು: ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಶಾರ್ದುಲ್ ಠಾಕೂರ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಭುವನೇಶ್ವರ್ ಕುಮಾರ್.
ನೆಟ್ ಬೌಲರ್‌ಗಳು (ಸಾಧ್ಯತೆ): ಚೇತನ್ ಸಕರಿಯಾ, ಅಂಕಿತ್ ರಾಜ್‌ಪೂತ್
ಇದನ್ನೂ ಓದಿ: ವಿಶ್ವಟೆಸ್ಟ್ ಚಾಂಪಿಯನ್ಶಿಪ್ಗೆ 22-24 ಸದಸ್ಯರ ತಂಡ ಪ್ರಕಟಿಸಲು ಚಿಂತನೆ