ನವದೆಹಲಿ : ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖಸ್ಥ ಸ್ಥಾನಕ್ಕೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಪ್ರಸ್ತುತ ಆ ಸ್ಥಾನದಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ಇದ್ದು, ಮತ್ತೆ ಅರ್ಜಿ ಸಲ್ಲಿಸಬಹುದು ಎನ್ನಲಾಗುತ್ತಿದೆ.
ದ್ರಾವಿಡ್ ಅಂಡರ್ 19 ಮತ್ತು ಎ ತಂಡಗಳ ಮುಖ್ಯ ಕೋಚ್ ಆಗಿ ಭಾರತ ಕ್ರಿಕೆಟ್ನ ಬೆಂಚ್ ಬಲಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನಂತರ 2019ರಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ನೇಮಕವಾಗಿದ್ದರು.
ಬಿಸಿಸಿಐ ಶಿಷ್ಟಾಚಾರಗಳ ಪ್ರಕಾರ ದ್ರಾವಿಡ್ ಅವರ 2 ವರ್ಷದ ಒಪ್ಪಂದ ಮುಗಿದಿದೆ. ಹಾಗಾಗಿ, ಬಿಸಿಸಿಐ ಅರ್ಜಿಗಳನ್ನು ಆಹ್ವಾನಿಸಿದೆ. ಆದರೆ, ದ್ರಾವಿಡ್ ಮತ್ತೆ ಎರಡು ವರ್ಷಗಳ ವಿಸ್ತರಣೆಗಾಗಿ ಮತ್ತೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಆಗಸ್ಟ್ 15ರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ರಾಹುಲ್ ದ್ರಾವಿಡ್ ಎನ್ಸಿಎ ಮುಖ್ಯಸ್ಥ ಸ್ಥಾನಕ್ಕೆ ಮರು ಅರ್ಜಿ ಸಲ್ಲಿಸಬಹುದು. ಆದರೆ, 2021ರ ಟಿ20 ವಿಶ್ವಕಪ್ ನಂತರ ಭಾರತ ತಂಡದ ಮುಖ್ಯ ಕೋಚ್ ಆಗಿರುವ ರವಿಶಾಸ್ತ್ರಿ ಅವರ ಅವಧಿ ಮುಕ್ತಾಯವಾಗಲಿದೆ.
ಹಾಗಾಗಿ, ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಆಗುವ ಎಲ್ಲಾ ಸಾಧ್ಯತೆಯಿದೆ. ಕೊನೆಗೆ ದ್ರಾವಿಡ್ ಸಂಸ್ಥೆಯ ಯಾವುದೇ ಒಂದು ಭಾಗವಾಗಿ ಉಳಿಯುವ ಸಾಧ್ಯತೆ ಹೆಚ್ಚಿದೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ಮಾಹಿತಿ ನೀಡಿವೆ.
ದ್ರಾವಿಡ್ ಇತ್ತೀಚೆಗೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ತಂಡದ ಭಾಗವಾಗಿದ್ದರು. ಶ್ರೀಲಂಕಾದಲ್ಲಿ ನಡೆದ ಆರು ಪಂದ್ಯಗಳ ಮುಕ್ತಾಯದ ನಂತರ, ದೀರ್ಘಾವಧಿಯ ಆಧಾರದ ಮೇಲೆ ಭಾರತದ ಮುಖ್ಯ ಕೋಚ್ ಆಗಲು ಬಯಸುತ್ತೀರಾ ಎಂದು ಕೇಳಿದ್ದಕ್ಕೆ, ತಾವೂ ಅಂತಹ ಹೈ ಪ್ರೊಫೈಲ್ ಹುದ್ದೆಗೆ ಬದ್ಧರಾಗಿಲ್ಲ ಎಂದಿದ್ದರು.
ಬಿಸಿಸಿಐ ಮುಖ್ಯ ಕೋಚ್ ಆಗಲು ಬಿಸಿಸಿಐ 60 ವರ್ಷ ವಯೋಮಿತಿ ನಿಗದಿ ಮಾಡಿದೆ. ಶಾಸ್ತ್ರಿಗೆ 59 ವರ್ಷಗಳಾಗಿರುವುದರಿಂದ, ಟಿ20 ವಿಶ್ವಕಪ್ ನಂತರ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ಹೆಸರು ಹೆಚ್ಚು ಕೇಳಿ ಬರುತ್ತಿದೆ.
ಇದನ್ನ ಓದಿ: Eng v/s Ind : 2ನೇ ಟೆಸ್ಟ್ಗೂ ಮುನ್ನ ಮಹತ್ತರ ಬದಲಾವಣೆ ಮಾಡಿಕೊಂಡ ಇಂಗ್ಲೆಂಡ್