ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶದ ವಿರುದ್ಧ ಏಕದಿನ ಸರಣಿ ಸೋತು ಅವಮಾನಕ್ಕೀಡಾಗಿದ್ದ ಭಾರತ ಕ್ರಿಕೆಟ್ ತಂಡ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಶೇರ್ ಎ ಬಾಂಗ್ಲಾ ಮೈದಾನದಲ್ಲಿ ನಡೆದ 2ನೇ ಟೆಸ್ಟ್ ಅನ್ನು ಭಾರತ 3 ವಿಕೆಟ್ಗಳಿಂದ ಗೆಲ್ಲುವ ಮೂಲಕ 2-0 ಅಂತರದಲ್ಲಿ ಸರಣಿ ಗೆದ್ದು ಬೀಗಿತು.
ಪಂದ್ಯ ಗೆಲ್ಲಲು 100 ರನ್ ಅಗತ್ಯದೊಂದಿಗೆ ನಾಲ್ಕನೇ ದಿನದಾಟ ಮುಂದುವರಿಸಿದ ಭಾರತಕ್ಕೆ ಆರಂಭದಲ್ಲೇ ವಿಘ್ನ ಉಂಟಾಯಿತು. ರಾತ್ರಿ ಕಾವಲುಗಾರನಾಗಿ ಬಂದಿದ್ದ ಜಯದೇವ್ ಉನದ್ಕಟ್, ಉತ್ತಮವಾಗಿ ಆಡುತ್ತಿದ್ದ ಅಕ್ಷರ್ ಪಟೇಲ್ 34 ರನ್ಗೆ ಔಟಾದರು. ಇದರ ಬೆನ್ನಲ್ಲೇ ರಿಷಬ್ ಪಂತ್ 9 ರನ್ಗೆ ವಿಕೆಟ್ ನೀಡಿದರು. ಇದು ಭಾರತದ ಗೆಲುವಿಗೆ ಒತ್ತಡ ಹೆಚ್ಚಿಸಿತು.
ಆದರೆ, ಶ್ರೇಯಸ್ ಅಯ್ಯರ್ ಮತ್ತು ರವಿಚಂದ್ರನ್ ಅಶ್ವಿನ್ ಮುರಿಯದ 8ನೇ ವಿಕೆಟ್ಗೆ ದಾಖಲೆಯ 71 ರನ್ ಗಳಿಸಿ ಗೆಲುವಿನ ದಡ ಮುಟ್ಟಿಸಿದರು. ಶ್ರೇಯಸ್ ಅಯ್ಯರ್ (29), ಅಶ್ವಿನ್ (42) 4ನೇ ದಿನದಾಟದಲ್ಲಿ 8 ನೇ ವಿಕೆಟ್ಗೆ ದಾಖಲಾದ 2ನೇ ಅತ್ಯಧಿಕ ಮೊತ್ತವಾಗಿದೆ. ಇದಕ್ಕೂ ಮೊದಲು 1932 ರಲ್ಲಿ ಅಮರ್ನಾಥ್ ಮತ್ತು ಲಾಲ್ ಸಿಂಗ್ ಇಂಗ್ಲೆಂಡ್ ವಿರುದ್ಧ 74 ರನ್ ಗಳಿಸಿದ್ದರು.
ಬಾಂಗ್ಲಾದೇಶದ ವಿರುದ್ಧ ಭಾರತ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 10 ರಲ್ಲಿ ಜಯ ಸಾಧಿಸಿದೆ. 2 ಪಂದ್ಯ ಡ್ರಾ ಕಂಡಿವೆ. ಮೊದಲ ಟೆಸ್ಟ್ ಪಂದ್ಯ ಗೆಲ್ಲುವ ಧಾವಂತದಲ್ಲಿದ್ದ ಬಾಂಗ್ಲಾಗೆ ಅಯ್ಯರ್ ಮತ್ತು ಅಶ್ವಿನ್ ತಣ್ಣೀರೆರಚಿದರು. ಬಾಂಗ್ಲಾ ಪರವಾಗಿ ಮೆಹದಿ ಹಸನ್ ಮಿರಾಜ್ 5 ವಿಕೆಟ್ ಕಿತ್ತರೆ, ಶಕೀಬ್ ಅಲ್ ಹಸನ್ 2 ವಿಕೆಟ್ ಪಡೆದರು.
ಪಂದ್ಯದ ವಿವರ: ಟಾಸ್ ಗೆದ್ದು ಮೊದಲು ಬ್ಯಾಟ್ ಆಯ್ದುಕೊಂಡ ಬಾಂಗ್ಲಾದೇಶಕ್ಕೆ ಭಾರತದ ವೇಗಿ ಉಮೇಶ್ ಯಾದವ್ ಮತ್ತು ಸ್ಪಿನ್ನರ್ ಅಶ್ವಿನ್ ಮಾರಕವಾದರು. ತಲಾ 4 ವಿಕೆಟ್ ಉರುಳಿಸಿ ಇಬ್ಬರೂ ಬಾಂಗ್ಲಾ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಮೊಮಿನುಲ್ ಹಕ್ರ 84 ರನ್ ಬಾರಿಸಿ ಪ್ರತಿರೋಧ ಒಡ್ಡಿದರು. ನಜ್ಮುಲ್ ಹೊಸೈನ್ ಶ್ಯಾಂಟೊ 24, ಮುಶ್ಫೀಕರ್ ರಹೀಮ್ 26, ಲಿಟನ್ ದಾಸ್ 25 ರನ್ ಗಳಿಸಿದ್ದರು. ತಂಡ 227 ರನ್ಗೆ ಪತನ ಕಂಡಿತ್ತು. 12 ವರ್ಷಗಳ ಬಳಿಕ ಕಣಕ್ಕಿಳಿದ ಜಯದೇವ್ ಉನಾದ್ಕಟ್ 2 ವಿಕೆಟ್ ಪಡೆದರು.
ಬಾಂಗ್ಲಾದ ಅಲ್ಪಮೊತ್ತ ಮೀರಿ ಬೃಹತ್ ಗುರಿ ನೀಡಲು ಕಣಕ್ಕಿಳಿದ ಭಾರತ ಮೊದಲ ಇನಿಂಗ್ಸ್ನಲ್ಲಿ 314 ರನ್ ಮಾತ್ರ ಗಳಿಸಿತು. 94 ರನ್ಗೆ 4 ವಿಕೆಟ್ ಕಳೆದುಕೊಂಡು ಕುಸಿಯುತ್ತಿದ್ದ ತಂಡಕ್ಕೆ ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ನೆರವಾದರು. ಪಂತ್ 93 ರನ್ ಮಾಡಿ ಶತಕದಿಂದ ವಂಚಿತರಾದರು. ಶ್ರೇಯಸ್ ಅಯ್ಯರ್ ಕೂಡ 87 ರನ್ಗೆ ವಿಕೆಟ್ ನೀಡಿ ಶತಕದ ಸಮೀಪ ಎಡವಿದರು. ಭಾರಿ ನಿರೀಕ್ಷೆ ಇರುವ ವಿರಾಟ್ ಕೊಹ್ಲಿ 24 ರನ್ಗೆ ಔಟಾದರು.
87 ರನ್ ಹಿನ್ನಡೆಯ ಜೊತೆಗೆ 2ನೇ ಇನಿಂಗ್ಸ್ಗಾಗಿ ಮೈದಾನಕ್ಕಿಳಿದ ಬಾಂಗ್ಲಾದೇಶ ಮತ್ತೊಮ್ಮೆ ಕುಸಿತ ಕಂಡಿತು. ಝಾಕೀರ್ ಹಸನ್ 51, ಲಿಟನ್ ದಾಸ್ 73, ನೂರುಲ್ ಹಸನ್ 31, ಟಸ್ಕಿನ್ ಅಹ್ಮದ್ 31 ರನ್ ಗಳಿಸಿದರು. ಉಳಿದ ಬ್ಯಾಟರ್ಗಳಿಂದ ರನ್ ಬಾರದ ಕಾರಣ 231 ರನ್ಗೆ ಆಲೌಟ್ ಆಯಿತು. ಅಶ್ವಿನ್, ಮೊಹಮದ್ ಸಿರಾಜ್ ತಲಾ 2, ಅಕ್ಷರ್ ಪಟೇಲ್ 3 ವಿಕೆಟ್ ಪಡೆದರು.
ಸಾಧಾರಣ ಗುರಿ ಬೆನ್ನತ್ತಿ ತಿಣುಕಾಡಿದ ಭಾರತ: ಗೆಲ್ಲಲು 144 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಭಾರತ ತಂಡ ಪಟಪಟನೇ ವಿಕೆಟ್ ಕಳೆದುಕೊಂಡಿತು. ಮೆಹದಿ ಹಸನ್ ದಾಳಿಗೆ ಕಂಗಾಲಾದ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಶುಭಮನ್ ಗಿಲ್ 7, ನಾಯಕ ಕೆಎಲ್ ರಾಹುಲ್ 2, ಚೇತೇಶ್ವರ್ ಪೂಜಾರಾ 6, ವಿರಾಟ್ ಕೊಹ್ಲಿ 1, ರಿಷಬ್ ಪಂತ್ 9 ರನ್ಗೆ ಔಟಾದರು.
ಇದರಿಂದ ಭಾರತ ತಂಡ ಒತ್ತಡಕ್ಕೆ ಒಳಗಾಯಿತು. ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಮತ್ತು ರವಿಚಂದ್ರನ್ ಅಶ್ವಿನ್ರ ಸೊಗಸಾದ ಆಟದಿಂದ ಇನ್ನೂ ಒಂದೂವರೆ ದಿನ ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದು ಸರಣಿ ಜಯಿಸಿತು. ಚೇತೇಶ್ವರ್ ಪೂಜಾ ಸರಣಿಶ್ರೇಷ್ಠ ಪ್ರಶಸ್ತಿ ಜಯಿಸಿದರು.
ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಸಾಧಿಸುವತ್ತ ಟೀಂ ಇಂಡಿಯಾ