ಅಲ್ಅಮೆರಾತ್(ಒಮಾನ್) : ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸೋಲು ಕಂಡಿರುವ ಬಾಂಗ್ಲಾದೇಶ ತಂಡ ಸೂಪರ್ 12 ಪ್ರವೇಶಿಸಬೇಕಾದರೆ ಇಂದು ನಡೆಯಲಿರುವ ಪಂದ್ಯದಲ್ಲಿ ಅತಿಥೇಯ ಒಮಾನ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಟೂರ್ನಿ ಆರಂಭಕ್ಕೂ ಮುನ್ನ ಬಾಂಗ್ಲಾದೇಶ ಬಿ ಗುಂಪಿನ ಪಂದ್ಯದಲ್ಲಿ ಸೂಪರ್ 12 ಪ್ರವೇಶಿಸುವ ಅಗ್ರ ತಂಡವಾಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಉದ್ಘಾಟನಾ ದಿನವೇ ಸ್ಕಾಟ್ಲೆಂಡ್ ವಿರುದ್ಧ 6 ರನ್ಗಳ ಸೋಲು ಕಂಡು ನಿರಾಸೆ ಅನುಭವಿಸಿತ್ತು. ಎದುರಾಳಿ ತಂಡದ ಆಲ್ರೌಂಡ್ ಪ್ರದರ್ಶನದ ಮುಂದೆ ಬಲಿಷ್ಠ ಬಾಂಗ್ಲಾ ತಂಡ ಮಂಕಾಗಿತ್ತು.
ಬಾಂಗ್ಲಾದೇಶ ಶಕಿಬ್, ರಹೀಮ್ ಮಹಮದುಲ್ಲಾ ಅಂತಹ ಸ್ಟಾರ್ ಆಟಗಾರರಿದ್ದರೂ ಸ್ಕಾಟ್ಲೆಂಡ್ ನೀಡಿದ್ದ 141 ರನ್ಗಳ ಸಾಧಾರಣ ಗುರಿಯನ್ನ ಚೇಸ್ ಮಾಡದೇ ಸೋಲು ಕಂಡಿತ್ತು. ಇದೀಗ ಮೊದಲ ಪಂದ್ಯದಲ್ಲಿ ಪಿಎನ್ಜಿ ವಿರುದ್ಧ 10 ವಿಕೆಟ್ಗಳ ಭರ್ಜರಿ ಜಯದೊಂದಿಗೆ ಉತ್ತಮ ಆರಂಭ ಪಡೆದು ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಒಮಾನ್ ವಿರುದ್ಧ ಬಾಂಗ್ಲಾ ಟೈಗರ್ಸ್ ಗೆದ್ದರೆ ಮಾತ್ರ ಸೂಪರ್ 12 ಪ್ರವೇಶಿಸಲಿದೆ. ಒಂದು ವೇಳೆ ಸೋಲು ಕಂಡರೆ ಇಂದೇ ಅವರ ವಿಶ್ವಕಪ್ ಅಭಿಯಾನ ಮುಕ್ತಾಯಗೊಳ್ಳಲಿದೆ.
ಇತ್ತ ಒಮಾನ್ ತವರಿನ ಲಾಭದೊಂದಿಗೆ ಬಲಿಷ್ಠ ಬಾಂಗ್ಲಾದೇಶಕ್ಕೆ ಸೋಲುಣಿಸಿ ಚೊಚ್ಚಲ ಬಾರಿಗೆ ಸೂಪರ್ 12 ಪ್ರವೇಶಿಸುವ ಆಲೋಚನೆಯಲ್ಲಿದೆ. ಬಿಲಾಲ್ ಖಾನ್, ಕನ್ವರ್ ಅಲಿ, ಜೀಶಾನ್ ಮಕ್ಸೂದ್ ಮತ್ತು ಕಲೀಮುಲ್ಲಾ ಅಂತಹ ಚಾಣಾಕ್ಷ ಬೌಲರ್ಗಳು ಮತ್ತು ಜತೀಂದರ್ ಸಿಂಗ್, ಅಕಿಬ್ ಇಲಿಯಾಸ್ ಸೇರಿ ಹಲವು ಸ್ಫೋಟಕ ದಾಂಡಿಗರನ್ನು ಹೊಂದಿರುವ ಒಮಾನ್ ಬಾಂಗ್ಲಾದೇಶಕ್ಕೆ ಸೋಲುಣಿಸಿದರೆ ಅಚ್ಚರಿ ಪಡುವ ಅಗತ್ಯವಿಲ್ಲ.
ಎರಡೂ ತಂಡಗಳು 2016ರ ಟಿ-20 ವಿಶ್ವಕಪ್ನಲ್ಲಿ ಮುಖಾಮುಖಿಯಾಗಿವೆ. ಆ ಪಂದ್ಯದಲ್ಲಿ ಬಾಂಗ್ಲಾದೇಶ ಸಂಪೂರ್ಣ ಪ್ರಾಬಲ್ಯ ಸಾಧಿಸಿ 54 ರನ್ಗಳ ಸುಲಭ ಜಯ ಸಾಧಿಸಿತ್ತು.
ಇದನ್ನು ಓದಿ:T20 World Cup ಅಭ್ಯಾಸ ಪಂದ್ಯ : ಕಿಶನ್, ರಾಹುಲ್ ಬ್ಯಾಟಿಂಗ್ ಅಬ್ಬರ .. ಟೀಂ ಇಂಡಿಯಾಗೆ ಗೆಲುವು