ಢಾಕಾ: ಶ್ರೀಲಂಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮುಶ್ಫೀಕರ್ ರಹೀಮ್ 87 ಎಸೆತಗಳಲ್ಲಿ 84 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. ಈ ಪಂದ್ಯದಲ್ಲಿ ಅವರು ನಿಧಾನವಾಗಿ ಬ್ಯಾಟಿಂಗ್ ಮಾಡಿದ್ದಕ್ಕೆ ಕಾರಣ ಕೊಟ್ಟಿದ್ದಾರೆ.
ಈ ಪಿಚ್ನಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾ ಕಷ್ಟ. ಹಾಗಾಗಿ ನಾನು ಕ್ರೀಸ್ಗೆ ಅಂಟಿಕೊಳ್ಳಲು ಸಮಯ ತೆಗೆದುಕೊಂಡೆ. ದೊಡ್ಡ ದೊಡ್ಡ ಹೊಡೆತ ಹೊಡೆಯಲು ನಾನು ಕೀರನ್ ಪೋಲಾರ್ಡ್ ಅಥವಾ ಆಂಡ್ರೆ ರಸೆಲ್ ಅಲ್ಲ. ನನ್ನ ಸಾಮರ್ಥ್ಯಕ್ಕೆ ಅಂಟಿಕೊಂಡು ನಾನು ಬ್ಯಾಟಿಂಗ್ ಮಾಡಿದ್ದೇನೆ ಎಂದರು.
"ಇದು ಬ್ಯಾಟಿಂಗ್ ಮಾಡಲು ಸುಲಭವಾದ ವಿಕೆಟ್ ಆಗಿರಲಿಲ್ಲ. ಶಕೀಬ್, ಲಿಟನ್ ಬೇಗನೆ ಔಟಾಗಿ ತಂಡ ಸಂಕಷ್ಟದಲ್ಲಿತ್ತು. ಆಗ ನನ್ನ ಮೇಲೆ ಒತ್ತಡವಿತ್ತು. ತಮೀಮ್ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ನಾನು ಕ್ರೀಸ್ಗೆ ಅಂಟಿಕೊಳ್ಳಲು ಸ್ವಲ್ಪ ಸಮಯ ಬೇಕಿತ್ತು. ತದನಂತರ ರಿಯಾದ್ ಅದ್ಭುತವಾಗಿ ತಂಡಕ್ಕೆ ನೆರವಾದರು. ನಾನು ದೊಡ್ಡ ವ್ಯಕ್ತಿಯಲ್ಲ, ಪೊಲಾರ್ಡ್ ಅಥವಾ ಆಂಡ್ರೆ ರಸೆಲ್ ಅಲ್ಲ, ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದ್ದೇನೆ. ಹಾಗಾಗಿ ಸಮಯ ತೆಗೆದುಕೊಂಡೆ "ಎಂದು ರಹೀಮ್ ಪಂದ್ಯದ ನಂತರ ಹೇಳಿದರು.
"ಒಂದು ಕಡೆ ಕ್ರೀಸ್ಗೆ ಅಂಟಿಕೊಂಡು ನಿಂತು ತಂಡವನ್ನು ಗೆಲ್ಲಿಸಲು ಹೋರಾಡಬೇಕಿತ್ತು. ಅದನ್ನೇ ನಾನು ಮಾಡಿದ್ದೇನೆ. ಅಸೀಫ್ ಕೊನೆಯ ಓವರ್ಗಳಲ್ಲಿ ತಂಡಕ್ಕೆ ಹೆಚ್ಚಿನ ರನ್ ತಂದುಕೊಟ್ಟರು, ಅದು ಅದ್ಭುತವಾಗಿತ್ತು. ಈ ಪರಿಸ್ಥಿತಿಯಲ್ಲಿ ವಿಕೆಟ್ ಸಹಕಾರಿಯಾಗಿರಲಿಲ್ಲ. ಹಾಗಾಗಿ ಅದಕ್ಕೆ ಹೊಂದಿಕೊಂಡು ಆಡಬೇಕಿತ್ತು. ನಮ್ಮ ತಂಡದ ಆಟಗಾರರು ಅದ್ಭುತವಾಗಿ ಆಡಿದ್ದಾರೆ" ಎಂದು ಅವರು ಶ್ಲಾಘಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ, ನಾಯಕ ತಮೀಮ್ ಇಕ್ಬಾಲ್ (52) ಮುಶ್ಫೀಕರ್ ರಹೀಮ್ (84) ಮತ್ತು ಮೊಹ್ಮದುಲ್ಲಾ (54) ಅರ್ಧಶತಕಗಳ ನೆರವಿನಿಂದ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 257 ರನ್ ಗಳಿಸಿತ್ತು. 258 ರನ್ಗಳ ಗುರಿ ಪಡೆದ ಶ್ರೀಲಂಕಾ ಆರಂಭದಿಂದಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 48.1 ಓವರ್ಗಲ್ಲಿ 224 ರನ್ಗಳಿಗೆ ಸರ್ವಪತನ ಕಂಡು 33 ರನ್ಗಳಿಂದ ಸೋಲುಂಡಿತು.