ಅಹಮದಾಬಾದ್(ಗುಜರಾತ್): ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳು (ಟ್ರಾನ್ಸ್‌ಜೆಂಡರ್) ಆಡದಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿಷೇಧ ವಿಧಿಸಿದೆ. ಮಹಿಳೆಯರ ಆಟದ ಸಮಗ್ರತೆ ಮತ್ತು ಆಟಗಾರರ ಸುರಕ್ಷತೆಗಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಐಸಿಸಿ ಹೇಳಿದೆ. 9 ತಿಂಗಳ ವ್ಯಾಪಕ ಸಮಾಲೋಚನೆಯ ನಂತರ ಮಹತ್ವದ ಲಿಂಗ ಅರ್ಹತಾ ನಿಯಮಗಳನ್ನು ಅನುಮೋದಿಸಲಾಗಿದೆ.
"ಮಹಿಳೆಯರ ಆಟದ ಸಮಗ್ರತೆಯ ರಕ್ಷಣೆ, ಸುರಕ್ಷತೆ, ನ್ಯಾಯಸಮ್ಮತತೆ ಮತ್ತು ಒಳಗೊಳ್ಳುವಿಕೆಯ ದೃಷ್ಟಿಯಿಂದ ಹೊಸ ನೀತಿಯನ್ನು ಜಾರಿಗೊಳಿಸಲಾಗಿದೆ. ಪ್ರೌಢಾವಸ್ಥೆಯನ್ನು ದಾಟಿದ ಯಾವುದೇ ಪುರುಷ ಮತ್ತು ಸ್ತ್ರೀ ಕೈಗೊಂಡಿರುವ ಯಾವುದೇ ಶಸ್ತ್ರಚಿಕಿತ್ಸೆ/ಲಿಂಗ ಮರುವಿನ್ಯಾಸ ಚಿಕಿತ್ಸೆಯ ಹೊರತಾಗಿಯೂ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಭಾಗವಹಿಸಲು ಅಂಥವರು ಅರ್ಹರಲ್ಲ" ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಕಳೆದ ಕೆಲವು ವರ್ಷಗಳಿಂದ ತೃತೀಯಲಿಂಗಿಗಳು ಮಹಿಳಾ ಕ್ರೀಡೆಯಲ್ಲಿ ಭಾಗವಹಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೀಗ ಐಸಿಸಿ ಏಕೆ ಈ ನಿರ್ಧಾರ ಕೈಗೊಂಡಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, "ಕ್ರಿಕೆಟ್ ಒಲಿಂಪಿಕ್ ಕ್ರೀಡೆಯಾಗುತ್ತಿದೆ. ಮಹಿಳೆಯರ ಕ್ರೀಡೆಗಳಲ್ಲಿ ಟ್ರಾನ್ಸ್ಜೆಂಡರ್ಸ್ ಭಾಗವಹಿಸುವಿಕೆಯು ಅಂತರರಾಷ್ಟ್ರೀಯ ಚರ್ಚೆಯ ವಿಷಯವಾಗಿದೆ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಕ್ರೀಡಾ ಒಕ್ಕೂಟಗಳಿಗೆ ಅವರ ಆಟಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದೆ" ಎಂದು ಅವರು ತಿಳಿಸಿದರು.
ವರ್ಲ್ಡ್ ಅಥ್ಲೆಟಿಕ್, ಟ್ರ್ಯಾಕ್ ಮತ್ತು ಫೀಲ್ಡ್ ಮತ್ತು ಇತರ ಓಟದ ಸ್ಪರ್ಧೆಗಳ ಆಡಳಿತ ಮಂಡಳಿಯು, ಪುರುಷ ಪ್ರೌಢಾವಸ್ಥೆಯನ್ನು ದಾಟಿದ ಟ್ರಾನ್ಸ್ಜೆಂಡರ್ ಮಹಿಳೆಯರನ್ನು ಅಂತರರಾಷ್ಟ್ರೀಯ ಮಹಿಳಾ ಸ್ಪರ್ಧೆಗಳಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಿದೆ. ಈ ನೀತಿಯು 31 ಮಾರ್ಚ್ 2023ರಂದು ಜಾರಿಗೆ ಬಂದಿದೆ. ಮಹಿಳೆಯಾಗಿ ಸ್ಪರ್ಧಿಸಲು, ಅಂತರರಾಷ್ಟ್ರೀಯ ಸ್ಪರ್ಧೆಯ ಮೊದಲು ಕನಿಷ್ಠ 24 ತಿಂಗಳವರೆಗೆ ಕ್ರೀಡಾಪಟುಗಳು ಪ್ರತಿ ಲೀಟರ್‌ಗೆ 2.5 ನ್ಯಾನೊಮೋಲ್‌ಗಳಿಗಿಂತ ಕಡಿಮೆ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೊಂದಿರಬೇಕು ಎಂದು ವರ್ಲ್ಡ್ ಅಥ್ಲೆಟಿಕ್ ತಿಳಿಸಿತ್ತು.
ದಕ್ಷಿಣ ಆಫ್ರಿಕಾದ ಓಟಗಾರ್ತಿ ಕ್ಯಾಸ್ಟರ್ ಸೆಮೆನಿಯಾ ಅವರ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವು ನಿಗದಿತ ಮಿತಿಗಿಂತ ಹೆಚ್ಚಿರುವ ಕಾರಣಕ್ಕೆ ಅವರು ಸ್ಪರ್ಧಿಸುವುದನ್ನು ನಿರ್ಬಂಧಿಸಲಾಗಿದೆ. ಸೈಕ್ಲಿಂಗ್ ಮತ್ತು ಈಜು ಸ್ಪರ್ಧೆಗಳಿಗೂ ವಿಶ್ವ ಆಡಳಿತ ಮಂಡಳಿಗಳು ಇದೇ ನಿಷೇಧವನ್ನು ಹೇರಿವೆ. ವಿಶ್ವ ರಗ್ಬಿಯು ಅಂತರರಾಷ್ಟ್ರೀಯ ಮಹಿಳಾ ರಗ್ಬಿಯಲ್ಲಿ ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಭಾಗವಹಿಸುವಿಕೆಯನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: ನ್ಯೂಜಿಲೆಂಡ್ ಕ್ರಿಕೆಟಿಗರನ್ನು ಸೆಳೆದ ಕಬಡ್ಡಿ: ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಹೇಳಿದ್ದೇನು?