ಮುಂಬೈ: ಬೆನ್ನು ನೋವಿನಿಂದ ಬಳಲುತ್ತಿರುವ ಸಿಎಸ್ಕೆ ಬೌಲಿಂಗ್ ಆಲ್ರೌಂಡರ್ ದೀಪಕ್ ಚಾಹರ್ ಪ್ರಸ್ತುತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರ ಬಿದ್ದಿದ್ದಾರೆ. ಅವರು ವೆಸ್ಟ್ ಇಂಡೀಸ್ ವಿರುದ್ಧ ಫೆಬ್ರವರಿಯಲ್ಲಿ ನಡೆದಿದ್ದ ಟಿ20 ಸರಣಿಯ ವೇಳೆ ಸ್ನಾಯು ಸೆಳೆತಕ್ಕೆ (quadriceps injury) ಒಳಗಾಗಿದ್ದರು. ನಂತರ ಶ್ರೀಲಂಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಯಲ್ಲೂ ಪಾಲ್ಗೊಂಡಿರಲಿಲ್ಲ.
ಸಿಎಸ್ಕೆ ತಂಡದ ಕಳೆದ ನಾಲ್ಕು ಆವೃತ್ತಿಗಳಲ್ಲಿ ಯಶಸ್ವಿ ಬೌಲರ್ ಆಗಿದ್ದ ದೀಪಕ್ ಚಾಹರ್ ಅನುಪಸ್ಥಿತಿಯಲ್ಲಿ ಪ್ರಸಕ್ತ ಸಾಲಿನ ಆವೃತ್ತಿಯಲ್ಲಿ ಕಣಕ್ಕಿಳಿದಿದ್ದ ಹಾಲಿ ಚಾಂಪಿಯನ್ಸ್, ಈಗಾಗಲೆ ಆಡಿರುವ ನಾಲ್ಕೂ ಪಂದ್ಯಗಳಲ್ಲೂ ಸೋಲುಂಡು ನಿರಾಶೆಯನುಭವಿಸಿದೆ. ಸದ್ಯ 10 ತಂಡಗಳ ಸ್ಪರ್ಧೆಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
ಮೆಗಾ ಹರಾಜಿನಲ್ಲಿ ದೀಪಕ್ರನ್ನು ಸಿಎಸ್ಕೆ 14 ಕೋಟಿ ರೂ ನೀಡಿ ಖರೀದಿಸಿತ್ತು. ಟೂರ್ನಿಗೂ ಮೊದಲೇ ಗಾಯಗೊಂಡಿದ್ದ ಅವರು, ಏಪ್ರಿಲ್ 2ನೇ ವಾರದ ವೇಳೆಗೆ ತಂಡಕ್ಕೆ ಮರಳಬಹುದು ಎಂದು ನಿರೀಕ್ಷೆ ಇತ್ತು. ಇದೀಗ ಆಲ್ರೌಂಡರ್ ಈ ಆವೃತ್ತಿಗೆ ಮರಳುವ ಸಾಧ್ಯತೆಯೇ ಇಲ್ಲ ಎನ್ನಲಾಗಿದೆ. ಮೂಲಗಳ ಪ್ರಕಾರ, ದೀಪಕ್ ಅವರಿಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದ ವೇಳೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಚೇತರಿಗೆ ಮತ್ತಷ್ಟು ಸಮಯ ಹಿಡಿಯಲಿದೆ ಎಂದು ತಿಳಿದುಬಂದಿದೆ.
ಹೊಸ ಚೆಂಡಿನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದ ಮತ್ತು ಬ್ಯಾಟಿಂಗ್ನಲ್ಲಿಯೂ ತಂಡಕ್ಕೆ ನೆರವಾಗುವ ಸಾಮರ್ಥ್ಯದ ಆಟಗಾರನ ಅಲಭ್ಯತೆ ಖಂಡಿತಾ ಸಿಎಸ್ಕೆಗೆ ದೊಡ್ಡ ನಷ್ಟವಾಗಲಿದೆ. 63 ಐಪಿಎಲ್ ಪಂದ್ಯಗಳಿಂದ ಚಾಹರ್ 59 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ:ಸೋತು ಸುಣ್ಣವಾಗಿರುವ ಸಿಎಸ್ಕೆಗೆ ಆರ್ಸಿಬಿ ಸವಾಲು.. ಕಮ್ಬ್ಯಾಕ್ ಮಾಡ್ತಾರಾ ಹಾಲಿ ಚಾಂಪಿಯನ್ಸ್