ಶಾರ್ಜಾ: ನಾಯಕ ಬಾಬರ್ ಅಜಮ್ ಮತ್ತು ಶೋಯಬ್ ಮಲಿಕ್ ಅವರ ಅರ್ಧಶತಕದ ನೆರವಿನಿಂದ ಐಸಿಸಿ ಟಿ20 ವಿಶ್ವಕಪ್ ಸೂಪರ್ 12ನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಎದುರಾಳಿ ಸ್ಕಾಟ್ಲೆಂಡ್ಗೆ 190 ರನ್ಗಳ ಬೃಹತ್ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಸ್ಕಾಟೀಸ್ ಬೌಲರ್ಗಳಿಗೆ ರನ್ಗಳಿಸಲು ಪರದಾಟ ನಡೆಸಿದರು. 19 ಎಸೆತಗಳಲ್ಲಿ ಒಂದು ಸಿಕ್ಸರ್ ನೆರವಿನಿಂದ 15 ರನ್ಗಳಿಸಿ ಹಂಜಾ ತಾಹೀರ್ಗೆ ವಿಕೆಟ್ ಒಪ್ಪಿಸಿದರು. ಇವರ ನಂತರ ಬಂದ ಫಖರ್ ಜಮಾನ್ ಕೇವಲ 8 ರನ್ಗಳಿಸಿ ಔಟಾದರು.
ಇನ್ನು ಮೂರನೇ ವಿಕೆಟ್ ಬಾಬರ್ ಜೊತೆಯಾದ ಅನುಭವಿ ಮೊಹಮ್ಮದ್ ಹಫೀಜ್ ಕೇವಲ 19 ಎಸೆತಗಳಲ್ಲಿ 31 ರನ್ ಸಿಡಿಸಿದರು. ಇವರು ನಾಯಕನ ಜೊತೆಗೂಡಿ 53 ರನ್ಗಳ ಕಾಣಿಕೆ ನೀಡಿದರು. ನಂತರ ರನ್ ಗತಿ ಹೆಚ್ಚಿಸಲು ಸ್ಫೋಟಕ ಬ್ಯಾಟಿಂಗ್ ನಡೆಸಿ ಬಾಬರ್ ಅಜಮ್ 47 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ 66 ರನ್ಗಳಿಸಿ ಪೆವಿಲಿಯನ್ ಸೇರಿದಕೊಂಡರು.
ಇನ್ನು ಕೊನೆಯ 2 ಓವರ್ಗಳಲ್ಲಿ ಅಬ್ಬರಿಸಿದ ಅನುಭವಿ ಬ್ಯಾಟರ್ ಶೋಯಬ್ ಮಲಿಕ್ ಕೇವಲ 18 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಮತ್ತು 1 ಬೌಂಡರಿ ಸಹಿತ ಅಜೇಯ 54 ರನ್ಗಳಿಸಿ 190ರನ್ಗಳ ಬೃಹತ್ ಮೊತ್ತ ದಾಖಲಿಸಲು ನೆರವಾದರು.
ಸ್ಕಾಟ್ಲೆಂಡ್ ಪರ ಕ್ರಿಸ್ ಗ್ರೀವ್ಸ್ 43ಕ್ಕೆ2, ಸಫಿಯಾನ್ 41ಕ್ಕೆ 2 ಮತ್ತು ಹಂಜಾ ತಾಹೀರ್ 24ಕ್ಕೆ 1 ವಿಕೆಟ್ ಪಡೆದರು.