ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ಬ್ಯಾಟರ್ಗಳು ಫ್ಲಾಪ್ ಆಗುತ್ತಿದ್ದು, ಆಲ್ರೌಂಡರ್ಗಳು ಕ್ಲಿಕ್ ಆಗುತ್ತಿದ್ದಾರೆ. ಅಕ್ಷರ್ ಪಟೇಲ್ ಎರಡು ಪಂದ್ಯದ ಎರಡು ಇನ್ನಿಂಗ್ಸ್ನಲ್ಲಿ ಗಳಿಸಿದ ಅರ್ಧಶತಕ ಭಾರತಕ್ಕೆ ಸಂಜೀವಿನಿಯಂತಾಗಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಅಲ್ಪ ಮೊತ್ತಕ್ಕೆ ಕುಸಿಯುತ್ತಿದ್ದ ತಂಡವನ್ನು ಆರ್.ಅಶ್ವಿನ್ ಮತ್ತು ಅಕ್ಷರ್ ಮೇಲಕ್ಕೆತ್ತಿದರು.
ಶನಿವಾರದ ದಿನದಾಟದಲ್ಲಿ ರವಿಚಂದ್ರನ್ ಅಶ್ವಿನ್ (37) ಮತ್ತು ಅಕ್ಷರ್ ಪಟೇಲ್ (74) ಎಂಟನೇ ವಿಕೆಟ್‌ಗೆ 114 ರನ್‌ಗಳ ಜೊತೆಯಾಟ ನೀಡಿದರು. ಇದರಿಂದ ಭಾರತ 262 ರನ್ ಕಲೆಹಾಕಿತು. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ಮೊತ್ತಕ್ಕಿಂತ ಕೇವಲ ಒಂದು ರನ್ ಹಿನ್ನಡೆ ಅನುಭವಿಸಿತು. ಮೊದಲ ಪಂದ್ಯದಲ್ಲಿ ಅಕ್ಷರ್ ಪಟೇಲ್ 84 ರನ್ ಗಳಿಸಿ 400 ರನ್ಗಳತ್ತ ತಂಡವನ್ನು ಕೊಂಡೊಯ್ದರು. ವಿದರ್ಭದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಕ್ಷರ್ಗೆ ರವೀಂದ್ರ ಜಡೇಜಾ ಜೊತೆಯಾಗಿದ್ದರು. ಇಬ್ಬರು ಸ್ವಿನ್ನರ್ಗಳ ಜೊತೆಯಾಟದ ಫಲವಾಗಿ ಭಾರತ ಇನ್ನಿಂಗ್ಸ್ ಸಹಿತ 132 ರನ್‌ಗಳಿಂದ ಗೆಲುವು ಸಾಧಿಸಿತ್ತು.
ಅಕ್ಷರ್ ಪಟೇಲ್ ಕಳೆದ 12 ತಿಂಗಳುಗಳಲ್ಲಿ ಬ್ಯಾಟರ್ ಆಗಿ ಕ್ಷಿಪ್ರ ಬೆಳವಣಿಗೆ ಹೊಂದಿದ್ದಾರೆ. ಇದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಕಾರಣ ಎಂದು ಅವರು ಹೇಳಿದ್ದಾರೆ. ಬೌಲಿಂಗ್ ಆಲ್ರೌಂಡರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದ ಅಕ್ಷರ್ ಈಗ ಬ್ಯಾಟಿಂಗ್ನಿಂದ ಆ ಸ್ಥಾನ ತುಂಬುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ ತಂಡಕ್ಕೆ ವಿಕೆಟ್‌ಗಳಿಗಿಂತ ಹೆಚ್ಚು ರನ್ ಸಂಪಾದಿಸಿಕೊಡುತ್ತಿದ್ದಾರೆ.
ಬ್ಯಾಟಿಂಗ್‌ನಲ್ಲಿ ಹೆಚ್ಚು ರನ್ ಗಳಿಸುತ್ತಿರುವುದರ ಬಗ್ಗೆ ಪಂದ್ಯದ ನಂತರ ಮಾತನಾಡಿರುವ ಅಕ್ಷರ್, "ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿ ಹೇಗೆ ಬ್ಯಾಟಿಂಗ್ ಉತ್ತಮಗೊಳಿಸಬಹುದು ಎಂಬುದರ ಕುರಿತು ರಿಕಿ ಪಾಂಟಿಂಗ್ ಅವರ ಜೊತೆ ಸಾಕಷ್ಟು ಮಾತನಾಡಿದ್ದೇನೆ. ಭಾರತ ತಂಡದಲ್ಲಿಯೂ ಸಹ ನಾನು ಬ್ಯಾಟರ್‌ಗಳೊಂದಿಗೆ ಈ ಬಗ್ಗೆ ಹೆಚ್ಚು ಚರ್ಚೆ ನಡೆಸುತ್ತೇನೆ. 30 ಮತ್ತು 40 ರನ್ ಹೆಚ್ಚಿಸಿಕೊಂಡು ಪಂದ್ಯ ಗೆಲ್ಲಲು ಹೇಗೆ ಕೊಡುಗೆ ನೀಡಬಹುದು ಎಂಬುದರ ಬಗ್ಗೆ ಯೋಚಿಸುತ್ತೇನೆ" ಎಂದಿದ್ದಾರೆ.
"ನಾನು ಮತ್ತು ಅಶ್ವಿನ್ ಬ್ಯಾಟಿಂಗ್‌ಗೆ ಬಂದಾಗ ಒತ್ತಡ ಇತ್ತು. ಆಸ್ಟ್ರೇಲಿಯಾ ನೀಡಿದ್ದ ಗುರಿಯ ಸನಿಹಕ್ಕೆ ರನ್ ತೆಗೆದುಕೊಂಡು ಹೋಗಬೇಕು ಎಂಬುದು ನಿರ್ಧಾರ ಮಾಡಿದೆವು. ಇಬ್ಬರೂ ಪಿಚ್ಗೆ ಹೊಂದಿಕೊಂಡ ನಂತರ ರನ್ ಗಳಿಸುವುದು ಸುಲಭವಾಯಿತು. ನಂತರ ಪಿಚ್ ಕೂಡ ಬ್ಯಾಟಿಂಗ್‌ಗೆ ಸಹಕಾರಿಯಾಗಿ ವರ್ತಿಸಿತು. ನಾವು ಇನ್ನಿಂಗ್ಸ್ ಕೊನೆಯಲ್ಲಿ ಆಸ್ಟ್ರೇಲಿಯಾದಿಂದ ಒಂದು ರನ್ ಹಿನ್ನಡೆ ಅನುಭವಿಸಿದೆವು" ಎಂದು ಹೇಳಿದರು.
ಇದನ್ನೂ ಓದಿ: 2ನೇ ಟೆಸ್ಟ್: 262 ರನ್ಗೆ ಭಾರತ ಆಲೌಟ್..ಆಸೀಸ್ಗೆ ಆರಂಭಿಕ ಆಘಾತ, 62 ರನ್ ಮುನ್ನಡೆ