ಟೂರ್ ಮ್ಯಾಚ್ ಆಡದೇ ಭಾರತಕ್ಕೆ ಬಂದಿದ್ದು ತಪ್ಪು; ತವರಿನಂತೆ ಇಲ್ಲಿ ಗೆಲ್ಲಲಾಗದು: ಕ್ಲಾರ್ಕ್ - Etv Bharat kannada
ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ ತೋರಿದ ಪ್ರದರ್ಶನದ ಬಗ್ಗೆ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅತೃಪ್ತಿ ಹೊರಹಾಕಿದ್ದಾರೆ.
ನವದೆಹಲಿ: ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ 0-2 ಅಂತರದಿಂದ ಹಿನ್ನಡೆ ಅನುಭವಿಸಿದೆ. ಇದರ ನಡುವೆ ಆಸೀಸ್ ತಂಡದ ಆಡಳಿತ ಮಂಡಳಿಯ ಕೆಲವು ನಿರ್ಧಾರಗಳ ಬಗ್ಗೆ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅಸಮಾಧಾನ ವ್ಯಕ್ತಪಡಿಸಿದ್ದು, ದಿಗ್ಗಜ ಕ್ರಿಕೆಟಿಗರಾದ ಮ್ಯಾಥ್ಯೂ ಹೇಡನ್ ಮತ್ತು ಮಾರ್ಕ್ ವಾ ಅವರ ಸಲಹೆ ಪಡೆಯದಿರುವ ಕುರಿತು ಪ್ರಶ್ನಿಸಿದ್ದಾರೆ.
ಪ್ರವಾಸಿ ತಂಡ ಟೂರ್ನಿಯ ಮೊದಲೆರಡು ಪಂದ್ಯಗಳನ್ನು ಸೋತು ಆಘಾತ ಅನುಭವಿಸಿದೆ. ಬುಧವಾರ ಮಧ್ಯಪ್ರದೇಶದ ಇಂದೋರ್‌ನಲ್ಲಿ 3ನೇ ಪಂದ್ಯ ಆರಂಭವಾಗಲಿದೆ. ನಾಯಕ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ತಂಡ ಮುನ್ನಡೆಸುವರು. ಆಸೀಸ್ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಬಗ್ಗೆ ಮೈಕಲ್ ಕ್ಲಾರ್ಕ್ ಮಾತನಾಡಿ, "ಮ್ಯಾಥ್ಯೂ ಹೇಡನ್ ಮತ್ತು ಮಾರ್ಕ್ ವಾ ಇಬ್ಬರೂ ಕಾಮೆಂಟೇಟರ್‌ಗಳಾಗಿ ಭಾರತದಲ್ಲಿದ್ದಾರೆ. ನಾನು ಆಸ್ಟ್ರೇಲಿಯನ್ ಕ್ಯಾಂಪ್‌ನಲ್ಲಿದ್ದರೆ, ಈ ಇಬ್ಬರೂ ಪ್ರತಿದಿನ ತಂಡದೊಂದಿಗೆ ನೆಟ್ನಲ್ಲಿ ಇರಬೇಕೆಂಬದು ಬಯಸುತ್ತಿದ್ದೆ" ಎಂದರು.
ಇದನ್ನೂ ಓದಿ: ಆಸ್ಟ್ರೇಲಿಯಾಕ್ಕೆ ಮೂವರು ಸ್ಪಿನ್ನರ್ಗಳ ಅಗತ್ಯ ಇಲ್ಲ: ಮೈಕೆಲ್ ಕಾಸ್ಪ್ರೊವಿಚ್
"ಸ್ವೀಪ್ ಸೇರಿದಂತೆ ಇತರ ವಿಷಯಗಳ ಬಗ್ಗೆ ಹೇಡನ್ ತಮ್ಮ ಕಾಮೆಂಟರಿಯಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ನೀವು ಪ್ರತಿ ಬಾಲ್ ಸ್ವೀಪ್ ಮಾಡಲು ಅಥವಾ ಪ್ರತಿ ಬಾಲ್ ರಿವರ್ಸ್ ಸ್ವೀಪ್ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಹೇಡನ್ ಅವರಿಗೆ ಗೊತ್ತಿದೆ. ಬ್ಯಾಟರ್ 80 ರನ್ ಗಳಿಸಿದಾಗ ಈ ಹೊಡೆತಗಳನ್ನು ಬಳಸಬಹುದು. ಆದರೆ, ನೀವು 8 ರನ್ ಗಳಿಸಿದಾಗ ಈ ರೀತಿ ಆಡಲು ಸಾಧ್ಯವಿಲ್ಲ" ಎಂದು ಕ್ಲಾರ್ಕ್ ತಿಳಿಸಿದ್ದಾರೆ.
"ತಮಗೆ ತೋಚಿದ್ದನ್ನು ನೇರವಾಗಿ ಹೇಳುವ ಮತ್ತು ಶಾರ್ಪ್ ಮೈಂಡ್ ಹೊಂದಿರುವ ಆಸ್ಟ್ರೇಲಿಯಾದ ಕ್ರಿಕೆಟಿಗರಲ್ಲಿ ಒಬ್ಬರಾದ ಕ್ಲಾರ್ಕ್, ತಂಡದ ಆಡಳಿತ ಮಂಡಳಿಯು ಮ್ಯಾಥ್ಯೂ ಹೇಡನ್ ಮತ್ತು ಮಾರ್ಕ್ ವಾ ಅವರನ್ನು ಆಟಗಾರರ ನೆರವಿಗೆ ಏಕೆ ಬಳಸಬಾರದು?, ಅವರ ಅನುಭವವನ್ನು ಏಕೆ ಉಪಯೋಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ. ಇದುವರೆಗೆ ಈ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ಪ್ರದರ್ಶನದ ಬಗ್ಗೆ ಅವರು ತೀವ್ರ ಹತಾಶೆ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳಿಗೆ ಭಾರಿ ನಿರಾಶೆ: ಇದೇ ವೇಳೆ ಟೆಸ್ಟ್ ಸರಣಿಯಲ್ಲಿ ಆಸೀಸ್ ಪುಟಿದೇಳಬಹುದೇ ಅಥವಾ ಸೌರವ್ ಗಂಗೂಲಿ ಭವಿಷ್ಯ ನುಡಿದಂತೆ ಭಾರತ 4-0 ಅಂತರದಲ್ಲಿ ಗೆಲ್ಲುತ್ತದೆಯೇ ಪ್ರಶ್ನೆಗೆ ಮೈಕಲ್ ಕ್ಲಾರ್ಕ್, "ತಂಡದ ಕೋಚ್, ಆಂಡ್ರ್ಯೂ ಮೆಕ್‌ಡೊನಾಲ್ಡ್ ಅವರು ಸ್ಪಿನ್‌ನ ಇಬ್ಬರು ಅತ್ಯುತ್ತಮ ಆಟಗಾರರಾದ ಮ್ಯಾಥ್ಯೂ ಹೇಡನ್ ಮತ್ತು ಮಾರ್ಕ್ ವಾ ಅವರಿಂದ ಸಹಾಯ ಪಡೆಯದಿರುವುದು ಅವರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಅದರೆ, ಆಸ್ಟ್ರೇಲಿಯಾ ಮತ್ತೆ ಪುಟಿದೇಳಬಹುದು ಎಂದು ನಾನು ಭಾವಿಸುತ್ತೇನೆ. ಹಾಗೆ ಮಾಡದಿದ್ದರೆ ಅದು ಪ್ರತಿಯೊಬ್ಬ ಆಸ್ಟ್ರೇಲಿಯನ್ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ನಿರಾಶೆ ಉಂಟು ಮಾಡುತ್ತದೆ" ಎಂದಿದ್ದಾರೆ.
ಅದೇ ಸಮಯದಲ್ಲಿ ಸೌರವ್ 4-0ರಿಂದ ಭಾರತ ಗೆಲ್ಲುತ್ತದೆ ಎಂದು ಯಾಕೆ ಭವಿಷ್ಯ ನುಡಿದಿದ್ದಾರೆಂದು ನನಗೆ ಅರ್ಥವಾಗಿದೆ. ಆಂಡ್ರ್ಯೂ ಮೆಕ್‌ಡೊನಾಲ್ಡ್ ಅಥವಾ ಬೇರೆ ಯಾವರು ಏನಾದರೂ ಹೇಳಬಹುದು. ಆದರೆ, ನನ್ನ ಪ್ರಕಾರ ಆಸ್ಟ್ರೇಲಿಯಾ ಮುಂಚೆಯೇ ಭಾರತಕ್ಕೆ ಬರಬೇಕಿತ್ತು. ಭಾರತಕ್ಕೆ ಹೋಗಲು ಸಾಧ್ಯವಾಗದಿದ್ದರೆ, ಅಂತಹ ಪ್ರವಾಸಕ್ಕೆ ತಯಾರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ನೀವು ಯುಎಇಗೆ ಹೋಗಬೇಕಾಗಿತ್ತು. ಅಲ್ಲದೇ, ಬೇರೆಡೆ ಪ್ರವಾಸ ಕೈಗೊಳ್ಳಬೇಕೆಂದು ಮಾಜಿ ಕ್ಯಾಪ್ಟನ್ ಅಭಿಪ್ರಾಯಪಟ್ಟಿದ್ದಾರೆ.
ಟೂರ್ ಮ್ಯಾಚ್ ಆಡದಿರುವುದು ತಪ್ಪು: "ಆಸ್ಟ್ರೇಲಿಯಾದಿಂದ ಹೊರಗೆ ಪ್ರವಾಸ ಮಾಡದೇ ಇರುವುದೇ ತಪ್ಪು. ಆಸ್ಟ್ರೇಲಿಯಾದ ಪರಿಸ್ಥಿತಿಗಳನ್ನು ಭಾರತಕ್ಕೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಇಂಗ್ಲೆಂಡ್‌ನಲ್ಲಿ ನೀವು ಸೀಮ್ ನಿರೀಕ್ಷಿಸುತ್ತೀರಿ, ಆಸ್ಟ್ರೇಲಿಯಾದಲ್ಲಿ ಬೌನ್ಸ್ ಮತ್ತು ಪೇಸ್ ಪ್ರಮುಖವಾಗುತ್ತದೆ. ಆದರೆ, ಭಾರತದಲ್ಲಿ ಸ್ಪಿನ್ ಮುಖ್ಯವಾಗುತ್ತದೆ. ನಾನು ತವರಿನಲ್ಲಿನ ಪರಿಸ್ಥಿತಿಗಳನ್ನು ಬೇರೆಡೆಯೂ ಪುನರಾವರ್ತನೆ ಮಾಡುತ್ತೇನೆ ಹಾಗೂ ಅಲ್ಲಿ ಗೆಲ್ಲುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು ಕ್ಲಾರ್ಕ್ ಚಾಟಿ ಬೀಸಿದ್ದಾರೆ.
ರೋಹಿತ್ ಬಗ್ಗೆ ಮೆಚ್ಚುಗೆ: ಇದುವರೆಗಿನ ಸರಣಿಯಲ್ಲಿ ರೋಹಿತ್ ನಾಯಕತ್ವದ ಬಗ್ಗೆಯೂ ಮಾತನಾಡಿರುವ ಕ್ಲಾರ್ಕ್, "ರೋಹಿತ್ ಆಟ ಅದ್ಭುತವಾಗಿದೆ. ಅವರು ಉತ್ತಮ ನಾಯಕ ಎಂದು ನಾನು ಭಾವಿಸುತ್ತೇನೆ. ಆಸ್ಟ್ರೇಲಿಯಾ ತಂಡ ನಾಲ್ವರು ಆಟಗಾರರನ್ನು ಬೌಂಡರಿಯಲ್ಲಿ ನಿಲ್ಲಿಸಿದರೆ, ರೋಹಿತ್ ಬ್ಯಾಟರ್ ಹತ್ತಿರದಲ್ಲೇ ನಾಲ್ವರು ಫೀಲ್ಡರ್‌ಗಳನ್ನು ನಿಲ್ಲಿಸುತ್ತಾರೆ. ಅದೇ ರೋಹಿತ್ ನಾಯತ್ವದ ವ್ಯತ್ಯಾಸ. ಅವರಿಗೇನು ಮಾಡಬೇಕೆಂದು ಗೊತ್ತಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಾಂಖೆಡೆಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ಜೀವಮಾನದ ಪ್ರತಿಮೆ : ವಿಶ್ವಕಪ್ ವೇಳೆಗೆ ಅನಾವರಣ