ಮೆಲ್ಬೋರ್ನ್ : ಆಸ್ಟ್ರೇಲಿಯಾ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ ಶುಕ್ರವಾರ ಭಾರತೀಯ ಮೂಲದ ವಾಣಿ ರಾಮನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನವ ದಂಪತಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಮ್ಯಾಕ್ಸ್ವೆಲ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಲಕ್ಷಾಂತರ ಅಭಿಮಾನಿ ಬಳಗಳನ್ನು ಸೃಷ್ಟಿಸಿಕೊಂಡಿದ್ದಾರೆ.
ವೃತ್ತಿಯಲ್ಲಿ ಭಾರತದೊಂದಿಗೆ ಸಂಬಂಧ ಹೊಂದಿದ್ಧ ಮ್ಯಾಕ್ಸ್ವೆಲ್ ಇದೀಗ ಭಾರತೀಯ ಮೂಲದ ಯುವತಿಯನ್ನು ಕೈ ಹಿಡಿಯುವ ಮೂಲಕ ವೈಯಕ್ತಿಕ ಜೀವನದಲ್ಲೂ ದೇಶದೊಂದಿಗೆ ವಿಶೇಷ ಬಾಂಧವ್ಯ ಬೆಳೆಸಿಕೊಂಡಿದ್ದಾರೆ.
![Australian cricketer Glenn Maxwell ties the Knot with Indian-origin Vini Raman](https://etvbharatimages.akamaized.net/etvbharat/prod-images/14773206_maxwell.jpg)
ಮ್ಯಾಕ್ಸ್ವೆಲ್-ವಾಣಿ ರಾಮನ್ ವಿವಾಹದ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಊಹಾಪೋಹಗಳು ಚರ್ಚೆಯಾಗುತ್ತಿದ್ದವು. ಏಕೆಂದರೆ, ಸಾಮಾಜಿಕ ಜಾಲತಾಣದಲ್ಲಿ ತಮಿಳು ಭಾಷೆಯಲ್ಲಿ ಮಾರ್ಚ್ 27ರಂದು ವಿವಾಹ ಎಂದು ಪ್ರಕಟಿಸಿದ ಲಗ್ನ ಪತ್ರಿಕೆ ಹರಿದಾಡಿತ್ತು.
ಇದೀಗ ಕ್ರಿಶ್ಚಿಯನ್ ಸಾಂಪ್ರದಾಯದ ಪ್ರಕಾರ ರಿಂಗ್ ಬದಲಾಯಿಸಿಕೊಂಡು ವಿವಾಹವಾಗಿದ್ದಾರೆ. ಲಗ್ನ ಪತ್ರಿಕೆಯಲ್ಲಿ ಮಾರ್ಚ್ 27 ಎಂದು ಇದ್ದಿದ್ದರಿಂದ, ಬಹುಶಃ ಹಿಂದೂ ಸಂಪ್ರಾಯದಲ್ಲಿ ವಿವಾಹವಾಗಬಹುದು.
ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ ಫೆಬ್ರವರಿಯಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿತ್ತು. ಇದೀಗ ವಿವಾಹವಾಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಉಂಗುರ ಬದಲಿಸಿಕೊಂಡಿರುವ ಫೋಟೋವನ್ನು ಹಂಚಿಕೊಂಡಿರುವ ಜೋಡಿ," ಪ್ರೀತಿಯು ಪೂರ್ಣಗೊಳ್ಳುವ ಹುಡುಕಾಟವಾಗಿದೆ ಮತ್ತು ನಿಮ್ಮೊಂದಿಗೆ ನಾನು ಸಂಪೂರ್ಣತೆಯನ್ನು ಅನುಭವಿಸುತ್ತೇನೆ ಎಂದು ಭಾವಿಸುವೆ" ಎಂದು ವಾಣಿ ಬರೆದುಕೊಂಡಿದ್ದಾರೆ. ಮ್ಯಾಕ್ಸ್ವೆಲ್ ಈ ಸ್ಕ್ರೀನ್ಶಾಟ್ ತೆಗೆದು ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಯುದ್ದ ಬಾಧಿತ ಉಕ್ರೇನ್ ಮಕ್ಕಳ ವಿದ್ಯಾಭ್ಯಾಸಕ್ಕೆ 3.8 ಕೋಟಿ ದೇಣಿಗೆ ನೀಡಿದ ಫೆಡರರ್